ಸಿನಿವಾಣಿ

ಬಾಲಿವುಡ್​ನಲ್ಲಿ ಪ್ರಣೀತಾ ಹಂಗಾಮ

arunakunigal

ಬೆಂಗಳೂರು: ದಕ್ಷಿಣದ ಸಿನಿಮಾಗಳಲ್ಲಿ ಖ್ಯಾತಿ ಗಳಿಸಿರುವ ನಟಿ ಪ್ರಣೀತಾ ಸುಭಾಷ್, ಬಾಲಿವುಡ್​ನಲ್ಲಿ ಖಾತೆ ತೆರೆದಿರುವುದು ಗೊತ್ತಿರುವ ವಿಚಾರವೇ.

ಒಪ್ಪಿಕೊಂಡ ಎರಡು ಸಿನಿಮಾಗಳ ಕೆಲಸ ಮುಗಿಸಿರುವ ಅವರು, ಇದೀಗ ಬಾಲಿವುಡ್​ನ ಸಿನಿಮಾ ಅನುಭವವನ್ನು ವಿಜಯವಾಣಿ ಜತೆಗೆ ಹಂಚಿಕೊಂಡಿದ್ದಾರೆ. ಅಭಿಷೇಕ್ ನಿರ್ದೇಶನದ ‘ಭುಜ್ - ದಿ ಪ್ರೖೆಡ್ ಆಫ್ ಇಂಡಿಯಾ’ ಸಿನಿಮಾ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿರುವ ಪ್ರಣೀತಾ, ಆ ಚಿತ್ರದ ಜತೆಗೆ ಪ್ರಿಯದರ್ಶನ್ ನಿರ್ದೇಶನದ ‘ಹಂಗಾಮ-2’ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿ, ಅದರ ಚಿತ್ರೀಕರಣವನ್ನೂ ಇತ್ತೀಚೆಗೆ ಮುಗಿಸಿದ್ದಾರೆ.

ಮೊದಲಿಗೆ ‘ಭುಜ್’ ಬಗ್ಗೆ ಹೇಳುವ ಪ್ರಣೀತಾ, ‘ಈ ಚಿತ್ರದ ಬಹುತೇಕ ಶೂಟಿಂಗ್ ಗುಜರಾತ್​ನ ಮೂಲ ಸ್ಥಳದಲ್ಲಿಯೇ ನಡೆದಿದೆ. 1971ರಲ್ಲಿ ಇಂಡೋ ಪಾಕ್ ನಡುವಿನ ಯುದ್ಧದ ಹಿನ್ನೆಲೆಯ ಸಿನಿಮಾ ಆಗಿರುವುದರಿಂದ ಅಷ್ಟೇ ರೋಚಕವಾಗಿ ಸಿನಿಮಾ ಮೂಡಿಬಂದಿದೆ. ಶೂಟಿಂಗ್ ಸಮಯದಲ್ಲಿ ಅಜಯ್ ದೇವಗನ್ ಅವರು ತುಂಬ ಸೀರಿಯಸ್! ಕೆಲಸದ ಬಗ್ಗೆಯೇ ಅವರ ಚರ್ಚೆಗಳು ನಡೆಯುತ್ತಿದ್ದವು. ನನ್ನ ಮೊದಲ ಬಾಲಿವುಡ್ ಚಿತ್ರದಲ್ಲಿ ಅವರೊಂದಿಗೆ ನಟಿಸಿದ್ದಕ್ಕೆ ಖುಷಿ ಇದೆ. ಸಂಪ್ರದಾಯಸ್ಥ ಮರಾಠಿ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೇನು ಆದಷ್ಟು ಬೇಗ ತೆರೆಗೆ ಬರಲಿದ್ದೇವೆ’ ಎನ್ನುತ್ತಾರೆ. ಅದೇ ರೀತಿ ‘ಹಂಗಾಮ-2’ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಬಾಲಿವುಡ್ ಸಿನಿಮಾ ಆದರೂ ಈ ತಂಡದಲ್ಲಿನ ಬಹುತೇಕ ಎಲ್ಲರು ದಕ್ಷಿಣ ಭಾರತದವರೇ. ಅದನ್ನು ವಿವರಿಸುವ ಪ್ರಣೀತಾ, ‘ಪ್ರಿಯದರ್ಶನ್ ಅವರ ‘ಹಂಗಾಮ-2’ ಸಿನಿಮಾ ಬೇರೆ ಭಾಷೆಯ ಸಿನಿಮಾ ಎಂದೆನಿಸಲಿಲ್ಲ. ನಮ್ಮ ದಕ್ಷಿಣದ ಸಿನಿಮಾ ಮಾಡಿದಂತೆ ಅನಿಸಿತು. ನಿರ್ದೇಶಕರು ಮಲಯಾಳಿಯಾದರೆ, ಹತ್ತಾರು ಮಂದಿ ತಮಿಳಿನವರಿದ್ದರು. ಹಾಸ್ಯ ಸಿನಿಮಾ ಹಾಸ್ಯಮಯವಾಗಿಯೇ ಮುಗಿದಿದೆ’ ಎಂಬುದು ಅವರ ಮಾತು. ಇನ್ನುಳಿದಂತೆ ಕನ್ನಡದಲ್ಲಿ ರಿಷಿ ಜತೆಗೆ ‘ರಾಮನ ಅವತಾರ’ ಸಿನಿಮಾಕ್ಕೂ ನಾಯಕಿಯಾಗಿ ಪ್ರಣೀತಾ ಆಯ್ಕೆಯಾಗಿದ್ದು, ಶೀಘ್ರದಲ್ಲಿಯೇ ಆ ಸಿನಿಮಾ ಸಹ ಶುರುವಾಗಲಿದೆ.

ಬಾಲಿವುಡ್​ನಲ್ಲಿ ಎರಡು ಚಿತ್ರಗಳ ಕೆಲಸ ಮುಗಿದಿದೆ. ಇದೇ ವರ್ಷ ಬಿಡುಗಡೆ ಆಗಲಿವೆ. ಈ ಸಿನಿಮಾದಿಂದಲೇ ಇನ್ನೂ ಎರಡ್ಮೂರು ಹಿಂದಿ ಸಿನಿಮಾ ಅವಕಾಶಗಳು ಬಂದಿವೆಯಾದರೂ, ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ.

| ಪ್ರಣೀತಾ ಸುಭಾಷ್ ನಟಿ