ಬೆಂಗಳೂರು: ದಕ್ಷಿಣ ಭಾರತದ ಸಿನಿಮಾಗಳ ಜತೆಗೆ ಬಾಲಿವುಡ್ನಲ್ಲೂ ಬಿಜಿಯಾಗಿದ್ದಾರೆ ನಟಿ ಪ್ರಣೀತಾ ಸುಭಾಷ್. ಸದ್ಯ ಪ್ರಿಯದರ್ಶನ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ಹಂಗಾಮಾ 2’ ಚಿತ್ರದಲ್ಲಿ ಪ್ರಣೀತಾ ನಟಿಸುತ್ತಿದ್ದಾರೆ.
ಈಗಾಗಲೇ ಚಿತ್ರದಲ್ಲಿ ಅವರ ಲುಕ್ ಹೇಗಿರಲಿದೆ ಎಂಬುದಕ್ಕೆ ಸಾಕ್ಷಿಯಾಗಿ ಒಂದು ಪೋಸ್ಟರ್ ಬಿಡುಗಡೆಯಾಗಿತ್ತು. ಈಗ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಮೀಜಾನ್ ಜೆಫ್ರಿ ಜನ್ಮದಿನದ ಪ್ರಯುಕ್ತ ಮತ್ತೊಂದು ಲುಕ್ ಬಿಡುಗಡೆ ಆಗಿದೆ. ಎಂದಿನಂತೆ ಶಿಲ್ಪಾ ಶೆಟ್ಟಿ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಸಂಗಡ ಪ್ರಣೀತಾ ಸುಭಾಷ್ ಮತ್ತು ಮೀಜಾನ್ ಪೋಸ್ಟರ್ನಲ್ಲಿದ್ದಾರೆ.
ಚಿತ್ರದ ಮುಖ್ಯ ಪಾತ್ರಧಾರಿ ಪರೇಶ್ ರಾವಲ್ ಕೈಯಲ್ಲಿ ಇಂಜಕ್ಷನ್ ಹಿಡಿದು ಬಂದಿದ್ದಾರೆ. ‘ಕನ್ಫ್ಯೂಶನ್ ಅನ್ಲಿಮಿಡೆಟ್’ ಎಂಬ ಟ್ಯಾಗ್ಲೈನ್ ಹೊತ್ತು ನಗಿಸಲೆಂದೆ ಸಿದ್ಧವಾಗುತ್ತಿರುವ ‘ಹಂಗಾಮಾ 2’ ಸದ್ಯ ಬಹುತೇಕ ಶೂಟಿಂಗ್ ಮುಗಿಸಿಕೊಂಡು, ಚಿತ್ರೀಕರಣೋತ್ತರ ಕೆಲಸಗಳತ್ತ ಮುಖ ಮಾಡಿದೆ.
‘ಹಲ್ಚಲ್’, ‘ಗರಮ್ ಮಸಾಲಾ’, ‘ದೇ ಧನಾ ಧನ್’ ಮುಂತಾದ ಸೂಪರ್ ಹಿಟ್ ಕಾಮಿಡಿ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಪ್ರಿಯದರ್ಶನ್, ಮತ್ತೊಮ್ಮೆ ನಗಿಸುವ ಉಸ್ತುವಾರಿ ಹೊತ್ತಿದ್ದಾರೆ.