ಸಿನಿವಾಣಿ

ಸರಣಿ ಕೊಲೆಗಳ ಬೆನ್ನತ್ತಿ…

ಚಿತ್ರ: ಪ್ರಕರಣ ತನಿಖಾ ಹಂತದಲ್ಲಿದೆ
ನಿರ್ದೇಶನ: ಸುಂದರ್ ಎಸ್.
ತಾರಾಗಣ: ಮಹೀನ್ ಕುಬೇರ್, ಚಿಂತನ್ ಕಂಬಣ್ಣ, ರಾಜ್ ಗಗನ್, ಪ್ರದೀಪ್ ಕುಮಾರ್ ಮತ್ತಿತರರು

ಶಿವ ಸ್ಥಾವರಮಠ
ಆ ಊರಿನಲ್ಲಿ ಸರಣಿ ಕೊಲೆಗಳಾಗುತ್ತಿರುತ್ತವೆ. ಆದರೆ, ಕೊಲೆಯಾದವರು ಹಾಗೂ ಕೊಲೆಯ ಹಿಂದಿನ ಕಾರಣ ಮಾತ್ರ ನಿಗೂಢ. ಆ ಊರಿಗೆ ಹೊಸದಾಗಿ ಬಂದ ಪೊಲೀಸ್ ಅಧಿಕಾರಿಗೂ (ಮಹೀನ್ ಕುಬೇರ್) ಈ ಪ್ರಕರಣಗಳು ತಲೆನೋವಾಗಿರುತ್ತವೆ. ಹೇಗಾದರೂ ತನಿಖೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎನ್ನುವಾಗ ಊರಿನ ವೈದ್ಯ ಭಾರ್ಗವ (ಚಿಂತನ್ ಕಂಬಣ್ಣ) ತಮ್ಮ ಗೌರವ್ (ಗಗನ್) ಕೊಲೆಯಾಗುತ್ತದೆ. ಆತನ ಶವದಲ್ಲಿ ಕೆಲ ಸಾಕ್ಷಿಗಳು ಸಿಗುತ್ತವೆ. ಅದನ್ನೇ ಆಧರಿಸಿ ತನಿಖೆ ಆರಂಭವಾಗುತ್ತದೆ. ಆಗ ಒಂದೊಂದೇ ಅಂಶಗಳು ತೆರೆದುಕೊಳ್ಳುತ್ತವೆ. ಈ ಸರಣಿ ಕೊಲೆಗಳ ಹಿಂದೆ ಒಂದು ದೊಡ್ಡ ಮಾಫಿಯಾ ಕೈವಾಡವೇ ಇರುತ್ತದೆ. ಈ ಮಾಫಿಯಾ ಯಾವುದು? ಅಷ್ಟಕ್ಕೂ ಆ ಸರಣಿ ಕೊಲೆಪಾತಕ ಯಾರು? ಎಂಬುದನ್ನು ಕೇವಲ 95 ನಿಮಿಷಗಳಲ್ಲಿ ‘ಪ್ರಕರಣ ತನಿಖಾ ಹಂತದಲ್ಲಿದೆ’ ಮೂಲಕ ನಿರೂಪಿಸಿದ್ದಾರೆ ನಿರ್ದೇಶಕ ಸುಂದರ್.

ಚಿತ್ರದ ಕಥೆ ಸರಳವಾಗಿದ್ದು, ಹೇಳಬೇಕಾಗಿರುವುದನ್ನು ಕಡಿಮೆ ಅವಧಿಯಲ್ಲಿ ಹೇಳಿ ಮುಗಿಸಿದ್ದಾರೆ ಸುಂದರ್. ಎಲ್ಲಿಯೂ ವೈಭವೀಕರಿಸಿ ಅತಿ ರಂಜನೆ ಮಾಡಲು ಹೋಗಿಲ್ಲ. ಗಂಭೀರ ಕಥೆಯಾದುದರಿಂದ ನಿರೂಪಣೆಯಲ್ಲೂ ಅಷ್ಟೇ ಗಂಭೀರತೆ ವಹಿಸಿದ್ದಾರೆ. ಇದೊಂದು ಕ್ರೈಂ-ಥ್ರಿಲ್ಲರ್ ಜಾನರ್ ಚಿತ್ರವಾದ್ದರಿಂದ ಇನ್ನೊಂದಿಷ್ಟು ರೋಚಕತೆ, ಕುತೂಹಲವನ್ನು ಕಥೆಯಲ್ಲಿ ಅಳವಡಿಸಿಕೊಳ್ಳವ ಅವಕಾಶ ಇತ್ತು. ಚಿತ್ರದ ಭಾವನಾತ್ಮಕ ದೃಶ್ಯಗಳು ಇನ್ನೊಂದಿಷ್ಟು ಪರಿಣಾಮಕಾರಿಯಾಗಿ ತೋರಿಸಬಹದಿತ್ತು. ನಿರ್ದೇಶಕರು ಮೊದಲ ಪ್ರಯತ್ನದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ.

ಚಿತ್ರದ ಕಥೆಯಲ್ಲಿ ಕೆಲವೇ ಕೆಲವು ಪಾತ್ರಗಳಿದ್ದರೂ ಎಲ್ಲರಿಗೂ ಮಹತ್ವ ನೀಡಲಾಗಿದೆ. ನಾಯಕನಟ ಮಹೀನ್ ಪೊಲೀಸ್ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಕೇವಲ ಸಿಗರೇಟ್ ಸೇದಲು, ಸಹಾಯಕ ಪೊಲೀಸ್ ಅಧಿಕಾರಿಗೆ ಕರೆ ಮಾಡುವಂತೆ ಸೂಚಿಸುವ ದೃಶ್ಯಗಳೇ ಅಧಿಕವಾದವು ಎನಿಸುತ್ತದೆ. ಚಿಂತನ್ ಕಂಬಣ್ಣ, ಗಗನ್, ಪ್ರದೀಪ್ ಕುಮಾರ್, ಮುತ್ತುರಾಜ್ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂಭಾಷಣೆ ಚಿತ್ರಕ್ಕೆ ಪೂರಕವಾಗಿದೆ. ಮೋಹನ್ ಮತ್ತು ಜಗದೀಶ್ ಛಾಯಾಗ್ರಹಣ ಹಾಗೂ ಲಕ್ಷ್ಮೀಪತಿ ವಿಎ್ಎಕ್ಸ್‌ನಲ್ಲಿ ಮೂಡಿಬಂದಿರುವ ದೃಶ್ಯಗಳು ಚಿತ್ರವನ್ನು ನೋಡಿಸಿಕೊಂಡು ಹೋಗುತ್ತವೆ. ಯುವಕರ ಭವಿಷ್ಯದ ಬಗ್ಗೆ ಯೋಚಿಸುವ ಈ ಸಿನಿಮಾವನ್ನು ಒಂದು ಬಾರಿ ನೋಡಬಹುದು.