Prabhas Fauzi Release Date
- ಡಿಸೆಂಬರ್ 3ರಂದು ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಫೌಜಿ ಸಿನಿಮಾ ರಿಲೀಸ್
- ರಕ್ತಸಿಕ್ತ ಮೈ, ಮೃತದೇಹದ ಮಧ್ಯೆ ಕುಳಿತ ಫೋಸ್ಟರ್ ರಿಲೀಸ್
- ಹನು ರಾಘವಪುಡಿ ನಿರ್ದೇಶನದ ಆಕ್ಷನ್ ಡ್ರಾಮಾ ಸಿನಿಮಾದ ಎರಡನೇ ಭಾಗವೂ ಇದೆ
- ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಭಾಷೆಯಲ್ಲಿ ಸಿನಿಮಾ ರಿಲೀಸ್
Prabhas Fauzi Release Date : ಸಾಹೋ, ರಾಧೆ ಶ್ಯಾಮ್ ಸಿನಿಮಾಗಳು ಅಷ್ಟಾಗಿ ರೆಬೆಲ್ ಸ್ಟಾರ್ ಪ್ರಭಾಸ್ಗೆ ಹಿಟ್ ಕೊಡಲಿಲ್ಲ,. ಇದೇ ವರ್ಷ ರಿಲೀಸ್ ಆದ ದಿ ರಾಜಾ ಸಾಬ್ ಅಂತೂ ಫ್ಲಾಪ್ ಆಗಿತ್ತು. ಸದ್ಯ ಇದೇ ವರ್ಷ ನಟ ಪ್ರಭಾಸ್ ಅವರ ಹೊಸ ಸಿನಿಮಾ 'ಫೌಜಿ' ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಈ ಚಿತ್ರದ ರಿಲೀಸ್ ಡೇಟ್ ಅನ್ನು ತಂಡ ಹಂಚಿಕೊಂಡಿದೆ.
ಸಿನಿಮಾ ರಿಲೀಸ್ ಆಗೋದ್ಯಾವಾಗ?
ಹೌದು, ಹನು ರಾಘವಪುಡಿ ನಿರ್ದೇಶನದ, ನಟ ಪ್ರಭಾಸ್ ನಟನೆಯ ಐತಿಹಾಸಿಕ ಯುದ್ಧ ಹಾಗೂ ಆಕ್ಷನ್ ಡ್ರಾಮಾ ಸಿನಿಮಾ 'ಫೌಜಿ' ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಅನೌನ್ಸ್ ಮಾಡಿದೆ. ಇದೇ ವರ್ಷ ಡಿಸೆಂಬರ್ 3ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅತ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.
ಜನಿವಾರ ತೊಟ್ಟ ಪ್ರಭಾಸ್
ಸಾಮಾನ್ಯವಾಗಿ ಎಲ್ಲ ಸಿನಿಮಾದಲ್ಲಿ ಪ್ರಭಾಸ್ ಅವರು ಚಾಕ್ಲೇಟ್ ಬಾಯ್ ಅಥವಾ ರಗಡ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರು ತೀವ್ರ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋತಿ ಧರಿಸಿ, ರಕ್ತದ ಕಲೆಯಿಂದ ಕೂಡಿರುವ ಜನಿವಾರ, ಶರ್ಟ್‌ಲೆಸ್ ಆಗಿ ಮೈತುಂಬಾ ರಕ್ತಸಿಕ್ತವಾಗಿ ಕಲ್ಲಿನ ಮೇಲೆ ಕುಳಿತಿರುವ ಪ್ರಭಾಸ್, ಜೊತೆಗೆ ರೈಫಲ್ ಹಿಡಿದು ರಕ್ತದ ಮಡುವಿನಲ್ಲಿ ಬಿದ್ದ ಮೃತದೇಹಗಳ ಮಧ್ಯೆ ಕುಳಿತುಕೊಂಡಿದ್ದಾರೆ.
ದಂಗೆ ಶುರುವಾಗಲಿದೆ
ಈ ಪೋಸ್ಟರ್ಗೆ ಒಂಟಿಯಾಗಿ ಹೋರಾಡುವ ಬೆಟಾಲಿಯನ್ ಎನ್ನುವ ಟ್ಯಾಗ್ಲೈನ್ ಅನ್ನು ನೀಡಲಾಗಿದೆ. ಸಿನಿಮಾ ರಿಲೀಸ್ ಡೇಟ್ ಹಂಚಿಕೊಂಡಿರುವ ಚಿತ್ರ ತಂಡ ಇದಕ್ಕೆ ಅಜ್ಞಾತಪರ್ವ ಕೊನೆಗೊಳ್ಳುತ್ತದೆ, ದಂಗೆ ಶುರುವಾಗಲಿದೆ ಎಂದು ಶೀರ್ಷಿಕೆ ಕೊಟ್ಟು ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಯಾರು?
ಸೀತಾರಾಮಂ ಸಿನಿಮಾ ಮೂಲಕ ಹಿಟ್ ಕಂಡ ನಿರ್ದೇಶಕ ಹನು ರಾಘವಪುಡಿ ಈ ಚಿತ್ರಕ್ಕೆ ನಿರ್ದೇಶಿಸಿದ್ದಾರೆ. ಈ ಮೂಲಕ ಅವರು ಪ್ರಭಾಸ್ ಜೊತೆಗೆ ಮೊದಲನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಪ್ರಾಜೆಕ್ಟ್ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದ್ದು, ಎರಡನೇ ಭಾಗವು ಮೊದಲ ಭಾಗದ ಪ್ರಿಕ್ವೆಲ್ (ಹಿಂದಿನ ಕಥೆ) ಆಗಿ ಮೂಡಿಬರಲಿದೆ.
ಯಾರೆಲ್ಲ ಸಿನಿಮಾದಲ್ಲಿ ಇದ್ದಾರೆ?
ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಅತ್ಯಂತ ದುಬಾರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಟಿ-ಸೀರೀಸ್ ಪ್ರೆಸೆಂಟ್ ಮಾಡುತ್ತಿದೆ. ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಇಮಾನ್ವಿ ಇಸ್ಮಾಯಿಲ್ ನಟಿಸುತ್ತಿದ್ದು, ಕನ್ನಡದ ನಟಿ ಚೈತ್ರಾ ಜೆ ಆಚಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಇವರ ಜೊತೆಗೆ ಹಿರಿಯ ನಟರಾದ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಜಯಪ್ರದಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜನೆ ಮತ್ತು ಸುದೀಪ್ ಚಟರ್ಜಿ ಛಾಯಾಗ್ರಹಣ ಈ ಚಿತ್ರಕ್ಕಿದೆ. 'ಫೌಜಿ' ಚಿತ್ರವು ಕನ್ನಡದಲ್ಲೂ ತೆರೆಕಾಣಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿಸಿದೆ, (ಏಜೆನ್ಸೀಸ್).