‘ಡಾಲಿ’ ಧನಂಜಯ ಅಭಿನಯ, ‘ದುನಿಯಾ’ ಸೂರಿ ನಿರ್ದೇಶನದ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾ ಶಿವರಾತ್ರಿಗೆ ಬಿಡುಗಡೆ ಆಗುತ್ತಿದೆ. ರಿಲೀಸ್ಗೂ ಮುನ್ನವೇ ಈ ಚಿತ್ರ 10 ಕೋಟಿ ರೂ. ಗಳಿಕೆ ಮಾಡಿದೆ ಎಂದರೆ ನೀವು ನಂಬಲೇಬೇಕು! ಟೀಸರ್ ಮೂಲಕ ಕ್ರೇಜ್ ಹೆಚ್ಚಿಸಿಕೊಂಡಿರುವ ‘ಪಾಪ್ಕಾರ್ನ್..’ ಚಿತ್ರವನ್ನು ಪುಷ್ಕರ್ ಫಿಲ್ಸ್ಂ, ಮೋಹನ್ ಫಿಲ್ಸ್ಂ ಬ್ಯಾನರ್ನಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ವಿತರಣೆ ಮಾಡುತ್ತಿದ್ದಾರೆ. ವಿದೇಶಿ ವಿತರಣೆಯ ಹಕ್ಕುಗಳು ನಾಲ್ಕು ಕೋಟಿ ರೂ.ಗೆ ಮಾರಾಟವಾಗಿದೆ ಎನ್ನುವುದು ಒಂದೆಡೆಯಾದರೆ, ಟಿವಿ ಹಕ್ಕುಗಳಿಗೂ ಬೇಡಿಕೆ ಹೆಚ್ಚಾಗಿದೆ. ಮನರಂಜನಾ ವಾಹಿನಿಗಳು ಚಿತ್ರ ಪಡೆದುಕೊಳ್ಳಲು ಸ್ಪರ್ಧೆ ನಡೆಸಿವೆ. ಡಿಜಿಟಲ್ ವೇದಿಕೆಯಿಂದಲೂ ‘ಪಾಪ್ಕಾರ್ನ್’ಗೆ ಆಹ್ವಾನ ಬಂದಿದೆ. ಅಮೆಜಾನ್ ಪ್ರೖೆಮ್ ಚಿತ್ರ ಪಡೆದುಕೊಳ್ಳಲು ಮನಸ್ಸು ಮಾಡಿದ್ದು, ಒಳ್ಳೆಯ ಮೊತ್ತವನ್ನೇ ಕೊಡಲು ಮುಂದೆ ಬಂದಿದ್ದಾರಂತೆ. ಇವೆಲ್ಲವನ್ನೂ ಅಳೆದು ತೂಗಿ ನೋಡಿದರೆ, ಬಿಡುಗಡೆಗೂ ಮೊದಲೇ 10 ಕೋಟಿ ರೂ.ಗೂ ಅಧಿಕ ಮೊತ್ತ ‘ಪಾಪ್ಕಾರ್ನ್’ ಬೊಕ್ಕಸಕ್ಕೆ ಬಂದಂತೆ ಎನ್ನಲಾಗುತ್ತಿದೆ. ಸದ್ಯ ಫೆ. 21ಕ್ಕೆ ಕರ್ನಾಟಕದಲ್ಲಿ 300ಕ್ಕೂ ಅಧಿಕ ಪರದೆಗಳ ಮೇಲೆ ಪಾಪ್ಕಾರ್ನ್ ಸಿನಿಮಾ ಬಿಡುಗಡೆ ಆಗಲಿದ್ದು, ಚೆನ್ನೈ, ಕೊಚ್ಚಿ, ಹೈದರಾಬಾದ್ನಲ್ಲೂ ಬಿಡುಗಡೆ ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ ನಿರ್ಮಾಪಕರು.