ಸಿನಿವಾಣಿ

ಸುಳ್ಳು ಮಾಡಿದ ಪೂಜಾ; ‘ರಾಧೇಶ್ಯಾಮ್' ಟ್ರೇಲರ್ ಬಿಡುಗಡೆಯಲ್ಲಿ ಭಾಗಿ

ಪ್ರಚಾರಕ್ಕೆ ಬರ್ತಾರಾ ಪೂಜಾ? ಇಂಥದ್ದೊಂದು ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಟಾಲಿವುಡ್​ನಲ್ಲಿ ಎಲ್ಲರನ್ನೂ ಕಾಡಿತ್ತು. ಅದಕ್ಕೆ ಕಾರಣವೂ ಇದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಡುವೆ ಎಲ್ಲವೂ ಚೆನ್ನಾಗಿಲ್ಲ ಎಂಬ ಸುದ್ದಿಯೊಂದು ಎಲ್ಲೆಡೆ ಹಬ್ಬಿ, ಅದರಿಂದ ಎಲ್ಲಿ ಅವರಿಬ್ಬರೂ ಜತೆಯಾಗಿ ನಟಿಸಿರುವ ‘ರಾಧೇ ಶ್ಯಾಮ್ ಚಿತ್ರದ ಬಿಡುಗಡೆಗೂ ಸಮಸ್ಯೆ ಆಗುತ್ತದೋ ಎಂಬ ಭಯ ಎಲ್ಲರಲ್ಲೂ ಇತ್ತು. ಆದರೆ, ಈ ಭಯವನ್ನು ಪೂಜಾ ಕಡಿಮೆ ಮಾಡಿದ್ದಾರೆ. ಬುಧವಾರ ಮುಂಬೈನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಇಂಥದ್ದೊಂದು ಸುದ್ದಿ ಎಲ್ಲಿಂದ, ಯಾಕೆ ಶುರುವಾಯಿತೋ ಗೊತ್ತಿಲ್ಲ. ಆದರೆ, ಪೂಜಾ ಮಾತ್ರ ಚಿತ್ರತಂಡದ ಜತೆಗೇ ಗುರುತಿಸಿಕೊಂಡಿದ್ದರು. ಎರಡು ತಿಂಗಳ ಹಿಂದೆ ಹೈದರಾಬಾದ್​ನಲ್ಲಿ ನಡೆದ ಚಿತ್ರದ ಪ್ರೀ-ರಿಲೀಸ್ ಇವೆಂಟ್​ನಲ್ಲೂ ಭಾಗವಹಿಸಿದ್ದರು. ಈಗ ಬುಧವಾರ ನಡೆದ ಕಾರ್ಯಕ್ರಮದಲ್ಲೂ ಪ್ರಭಾಸ್ ಜತೆಗೂ ಕಾಣಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ನಡುವೆ ಕಲಹವಿಲ್ಲ ಎಂದು ಪೂಜಾ, ಸುದ್ದಿಗಳನ್ನು ಸುಳ್ಳು ಮಾಡಿದ್ದಾರೆ. ಅಂದಹಾಗೆ, ‘ರಾಧೇ ಶ್ಯಾಮ್ ಚಿತ್ರವು ಮಾರ್ಚ್ 11ರಂದು ಜಗತ್ತಿನಾದ್ಯಂತ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ರಾಧಾಕೃಷ್ಣ ಕುಮಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಜತೆಗೆ ಭಾಗ್ಯಶ್ರೀ, ಕೃಷ್ಣಂರಾಜು, ಜಗಪರಿ ಬಾಬು, ಸತ್ಯರಾಜ್ ಮುಂತಾದವರು ನಟಿಸಿದ್ದಾರೆ.