ಮುಂಬೈ: ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದು ವಿವಾದಕ್ಕೆ ಸಾಕಷ್ಟು ಕಾರಣವಾಗಿದೆ. ಈ ವಿವಾದಕ್ಕೆ ವಿರೋಧ ವ್ಯಕ್ತಪಡಿಸುವುದರ ಜತಗೆ, ಚಿತ್ರತಂಡದವರಿಗೆ ಹಲವು ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಈಗ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸಹ ತಮ್ಮ ಬೆಂಬಲ ಸೂಚಿಸಿದ್ದಾರೆ.
'ಮಿಸಸ್ ಫಲಾನಿ' ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸ್ವರಾ ಅವರನ್ನು ಇತ್ತೀಚೆಗೆ ಈ ವಿವಾದದ ಕುರಿತು ಕೇಳಿದಾಗ, 'ನಾವು ಹೇಗೆ ನಮ್ಮ ಕೆಲಸದ ಬಗ್ಗೆ ಗಮನಹರಿಸುತ್ತೇವೋ, ಅದೇ ರೀತಿ ರಾಜಕಾರಣಿಗಳು ಸಹ ನಟಿಯರ ಬಟ್ಟೆ ಬಗ್ಗೆ ಯೋಚಿಸುವುದನ್ನು ಬಿಟ್ಟು, ತಮ್ಮ ಕೆಲಸದ ಬಗ್ಗೆ ಫೋಕಸ್ ಮಾಡಲಿ' ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ನಟ ಪ್ರಕಾಶ್ ರೈ ಈ ವಿವಾದದ ಕುರಿತು ಬೇಸರ ವ್ಯಕ್ತಪಡಿಸಿದ್ದರು. 'ಕೇಸರಿ ಬಣ್ಣದವರು ರೇಪಿಸ್ಟ್ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ. ಕೇಸರಿ ಬಣ್ಣ ತೊಟ್ಟವರು ಮೈನರ್ಗಳನ್ನು ರೇಪ್ ಮಾಡುತ್ತಾರೆ. ಆದರೆ, ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ' ಎಂದು ಹೇಳಿದ್ದರು.
ಇನ್ನು, ಹಿರಿಯ ನಟಿ ಆಶಾ ಪರೇಖ್, 'ಏನೇ ಆದರೂ ಅದೊಂದು ಚಿತ್ರ ಅಷ್ಟೇ. ಅದರ ಉದ್ದೇಶ ಮನರಂಜನೆ ಅಷ್ಟೇ. ಒಬ್ಬ ನಟಿ ಕೇಸರಿ ಬಣ್ಣದ ಬಿಕಿನಿ ತೊಟ್ಟರು ಎಂಬ ಕಾರಣಕ್ಕೆ ಬ್ಯಾನ್ ಮಾಡುವುದಕ್ಕೆ ಆಗುತ್ತದಾ? ಅದು ಸರಿಯಲ್ಲ. ಮೊದಲೇ ಚಿತ್ರಗಳು ಒಳ್ಳೆಯ ಪ್ರದರ್ಶನ ಕಾಣದೆ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರದೆ ಚಿತ್ರರಂಗ ಕ್ರಮೇಣ ಸಾಯುತ್ತಿದೆ. ಹೀಗಿರುವಾಗ ಬಾಯ್ಕಾಟ್ ಮತ್ತು ಬ್ಯಾನ್ ಎಂಬ ಪದಗಳೆಲ್ಲ ಬೇಕಾ? ಸಿನಿಮಾಗಳು ಹೀಗೇ ಸೋಲುತ್ತಿದ್ದರೆ, ಮುಂದೆ ಸಿನಿಮಾಗಳನ್ನು ಮಾಡುವುದು ಹೇಗೆ? ಇದೇ ಮುಂದುವರೆದರೆ ಚಿತ್ರರಂಗ ಅಂತ್ಯವಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸಿದ್ದರು.
ಇದೆಲ್ಲದರ ಮಧ್ಯೆ, 'ಪಠಾಣ್' ಚಿತ್ರವು ಜನವರಿ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಾಕಷ್ಟು ವೈರಲ್ ಆಗಿದೆ.