ಸಿನಿವಾಣಿ

ಮಲಯಾಳಂ ಬ್ಯೂಟಿ ಹನಿ ರೋಸ್​ ಬಗ್ಗೆ ಡಬಲ್​ ಮೀನಿಂಗ್​ ಮಾತು: ಉದ್ಯಮಿ ಬಾಬಿ ಚೆಮ್ಮನೂರ್ ಪೊಲೀಸರ ವಶ! Honey Rose

Honey Rose : ಮಲಯಾಳಂ ನಟಿ ಹನಿರೋಸ್ ನೀಡಿದ ದೂರಿನ ಮೇರೆಗೆ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್​ ಅವರನ್ನು ಕೇರಳ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ವಯನಾಡ್​ನಲ್ಲಿದ್ದ ಬಾಬಿ ಚೆಮ್ಮನೂರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಹನಿ ರೋಸ್ ನೀಡಿದ ದೂರಿನ ಮೇರೆಗೆ ತನಿಖೆಗಾಗಿ ಕೇರಳ ಪೊಲೀಸ್​ ಇಲಾಖೆ ಎರ್ನಾಕುಲಂ ಸೆಂಟ್ರಲ್ ಎಸಿಪಿ ಜಯಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿತ್ತು. ಅಗತ್ಯ ಬಿದ್ದರೆ ತನಿಖಾ ತಂಡವನ್ನು ವಿಸ್ತರಿಸಲಾಗುವುದು ಎಂದು ಕೊಚ್ಚಿ ಪೊಲೀಸರು ಮಾಹಿತಿ ನೀಡಿದ್ದರು. ಬಾಬಿ ಚೆಮ್ಮನೂರ್ ಅವರಿಗೆ ನೋಟಿಸ್ ಸಹ ಜಾರಿ ಮಾಡಿತ್ತು. ಇದೀಗ ವಯನಾಡಿನಲ್ಲಿ ಉದ್ಯಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಉದ್ಯಮಿ ಬಾಬಿ ಚೆಮ್ಮನ್ನೂರ್ ವಿರುದ್ಧ ಹನಿ ರೋಸ್ ದೂರು ದಾಖಲಿಸಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ವೇದಿಕಗಳಲ್ಲಿ ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ನಿಂದಿಸಿದ್ದಾರೆ ಎಂದು ಹನಿ ರೋಸ್​ ಆರೋಪಿಸಿದ್ದರು. ಬಾಬಿ ಚೆಮ್ಮನೂರ್ ಅವರೇ ನನ್ನ ವಿರುದ್ಧ ನೀವು ಮಾಡಿದ ನಿರಂತರ ಅಶ್ಲೀಲ ನಿಂದನೆಗಳ ವಿರುದ್ಧ ನಾನು ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಿಮ್ಮಂತೆಯೇ ಮಾನಸಿಕ ಸ್ಥಿತಿ ಹೊಂದಿರುವ ನಿಮ್ಮ ಸಹಚರರ ವಿರುದ್ಧವೂ ದೂರುಗಳು ದಾಖಲಾಗಿವೆ. ನೀವು ನಿಮ್ಮ ಹಣವನ್ನು ನಂಬುತ್ತೀರಿ, ಆದರೆ, ನಾನು ಭಾರತದಲ್ಲಿನ ಕಾನೂನು ವ್ಯವಸ್ಥೆಯನ್ನು ನಂಬುತ್ತೇನೆ ಎಂದು ಹನಿ ರೋಸ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಇದೇ ವೇಳೆ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಬಿ ಚೆಮ್ಮನೂರು, ಹನಿ ರೋಸ್​ ವಿರುದ್ಧ ಯಾವುದೇ ಡಬಲ್ ಮೀನಿಂಗ್ ಅಥವಾ ದುರುದ್ದೇಶಪೂರಿತ ಭಾಷಣವನ್ನು ಮಾಡಿಲ್ಲ. ನಾನು ಹೇಳಿದನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿರುಚಲಾಗಿದೆ ಎಂದು ಹೇಳಿದ್ದಾರೆ.

ಜಾಲತಾಣದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ಹನಿ ರೋಸ್ ಈ ಹಿಂದೆ ದೂರು ದಾಖಲಿಸಿದ್ದರು. ಪೊಲೀಸರು 30 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ. ಆಕೆಯ ಇನ್​​ಸ್ಟಾಗ್ರಾಂ ಪೇಜ್​ನಲ್ಲಿ ಕಿರುಕುಳ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಅಂದಹಾಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್​ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್​ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ಕೆಲ ತಮಿಳು ಮತ್ತು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹನಿ ರೋಸ್​ ಬಿಜಿಯಾಗಿದ್ದಾರೆ.

ವಿನಯನ್ ನಿರ್ದೇಶನದ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಹನಿ ರೋಸ್, ಚಿತ್ರರಂಗದಲ್ಲಿ 20 ಪೂರೈಸಿದ್ದಾರೆ. ಪ್ರಸ್ತುತ ಹನಿ ರೋಸ್ ರಾಚೆಲ್‌ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈ ಸಿನಿಮಾ ಇದೇ ಜನವರಿ 12ರಂದು ಬಿಡುಗಡೆಯಾಗಲಿದೆ. ಸಿನಿಮಾ ಹೊರತಾಗಿ ಉದ್ಘಾಟನಾ ಸಮಾರಂಭಗಳಿಗೆ ಹನಿರೋಸ್​ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹನಿ ಭಾಗವಹಿಸಿದ ಎಲ್ಲ ಉದ್ಘಾಟನಾ ಸಮಾರಂಭಗಳಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಹನಿಯ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುವುದರ ಜತೆಗೆ, ಅವರ ವಿರುದ್ಧ ಸೈಬರ್ ದಾಳಿಗಳು ಹೆಚ್ಚಾಗುತ್ತಿವೆ. (ಏಜೆನ್ಸೀಸ್​)