ಸಿನಿವಾಣಿ

ನಟ ಅಜಯ್​ ದೇವಗನ್​ ವಿರುದ್ಧ ಪೊಲೀಸ್​ಗೆ ದೂರು, ಹಿಂದೂಗಳ ಭಾವನೆಗೆ ಧಕ್ಕೆ ಆರೋಪ..

ನವದೆಹಲಿ: ಬಾಲಿವುಡ್ ನಟರು ಆಗಾಗ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುವುದು ಹೊಸದೇನಲ್ಲ. ಇದೀಗ ನಟರಾದ ಅಜಯ್ ದೇವಗನ್ ಹಾಗೂ ಸಿದ್ಧಾರ್ಥ್​ ಮಲ್ಹೋತ್ರ ಕೂಡ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿದ್ದು, ಅವರ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.

ಅಜಯ್​ ದೇವಗನ್ ಮತ್ತು ಸಿದ್ಧಾರ್ಥ್​ ಮಲ್ಹೋತ್ರ ಅಭಿನಯದ ನೂತನ ಸಿನಿಮಾ 'ಥ್ಯಾಂಕ್​ ಗಾಡ್​'ನಲ್ಲಿ ಇವರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ಮಾತ್ರವಲ್ಲ, ನಿರ್ಮಾಣ ಸಂಸ್ಥೆಯಾದ ಟಿ-ಸೀರಿಸ್ ವಿರುದ್ಧವೂ ದೂರು ನೀಡಲಾಗಿದೆ.

ಸಿನಿಮಾದಲ್ಲಿ ಪುರಾಣ ಪುರುಷ ಚಿತ್ರಗುಪ್ತನ ಅಸಭ್ಯವಾಗಿ ಬಿಂಬಿಸಲಾಗಿದೆ. ಚಿತ್ರಗುಪ್ತನನ್ನು ಆಧುನಿಕ ಉಡುಪಿನಲ್ಲಿ ತೋರಿಸಿರುವುದಷ್ಟೇ ಅಲ್ಲದೆ, ಆತನನ್ನು ಅರೆಬೆತ್ತಲೆ ಮಹಿಳೆಯರು ಸುತ್ತುವರಿದಿರುವಂತೆ ಕೂಡ ಚಿತ್ರೀಕರಿಸಿರುವುದು ಟ್ರೇಲರ್​ನಲ್ಲಿ ಕಂಡುಬಂದಿದೆ ಎಂಬುದಾಗಿ ಕಾಯಸ್ಥ ಸಮಾಜದ ಪ್ರತಿನಿಧಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಯಸ್ಥ ಸಮಾಜದ ಮುಖಂಡ, ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ್ ಸಕ್ಸೇನ ನಿಹಲ್​ಗಂಜ್​ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಯಸ್ಥ ಮಹಾಸಭಾದ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಸಂಜೀವ್ ಶ್ರೀವಾಸ್ತವ ಈ ಸಂಬಂಧವಾಗಿ ಡಿಸಿಗೆ ಮನವಿ ಕೂಡ ನೀಡಿದ್ದಾರೆ.

ಚಿತ್ರಗುಪ್ತರನ್ನು ಅಸಭ್ಯವಾಗಿ ಚಿತ್ರಿಸಿರುವುದು ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವುದಷ್ಟೇ ಅಲ್ಲದೆ, ಸಾಮಾಜಿಕ ಸಾಮರಸ್ಯವನ್ನು ಕೆಡಿಸುವಂಥದ್ದು. ಹೀಗಾಗಿ ಈ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. - ಏಜೆನ್ಸೀಸ್