ಬೆಂಗಳೂರು: ಲಾಕ್ಡೌನ್ ನಂತರ ಕನ್ನಡದಲ್ಲಿ ಬಿಗ್ ಬಜೆಟ್ ಚಿತ್ರಗಳ ಮೆರವಣಿಗೆ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಿಂದ ಶುರುವಾಗಲಿದೆ ಎಂದು ಕಳೆದ ವರ್ಷದ ಕೊನೆಯಲ್ಲಿ ಹೇಳಲಾಗಿತ್ತು. ಅದಕ್ಕೆ ಸರಿಯಾಗಿ ಜನವರಿ ಮೊದಲ ಅಥವಾ ಎರಡನೆಯ ವಾರದಲ್ಲಿ ‘ಪೊಗರು’ ಬಿಡುಗಡೆ ಎಂದು ಹೇಳಲಾಯ್ತು. ಆ ನಂತರ ಫೆಬ್ರವರಿ ಮೊದಲ ಅಥವಾ ಎರಡನೇ ವಾರ ಎಂದು ಸುದ್ದಿಯಾಯ್ತು. ಇದೀಗ ಏಪ್ರಿಲ್ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಳೆದ ಎರಡು ದಿನಗಳಲ್ಲಿ ‘ಪೊಗರು’ ಚಿತ್ರದ ‘ಏಪ್ರಿಲ್ನಲ್ಲಿ ಬಿಡುಗಡೆ’ ಎಂಬ ಹೊಸ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಚಿತ್ರ ಮುಂದಕ್ಕೆ ಹೋಗಿರುವ ಕುರಿತು ಧ್ರುವ ಅಭಿಮಾನಿಗಳಲ್ಲಿ ನಿರಾಸೆ ಮನೆಮಾಡಿದೆ. ಆದರೆ, ನಿರ್ವಪಕ ಗಂಗಾಧರ್ ಮಾತ್ರ ಚಿತ್ರ ಫೆಬ್ರವರಿಯಲ್ಲೇ ಬಿಡುಗಡೆಯಾಗುತ್ತದೆ ಎನ್ನುತ್ತಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಚಿತ್ರದ ಪೋಸ್ಟ್ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. 2-3 ದಿನಗಳಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸುತ್ತೇವೆ. ಫೆಬ್ರವರಿ 12ಕ್ಕೆ ಅಥವಾ 19ಕ್ಕೆ ಚಿತ್ರ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವುದು ನಿಶ್ಚಿತ’ ಎನ್ನುತ್ತಾರೆ.
ಈ ಮಧ್ಯೆ, ಪ್ರಜ್ವಲ್ ಅಭಿನಯದ ‘ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರವು ಫೆಬ್ರವರಿ 12ಕ್ಕೆ ಬಿಡುಗಡೆಯಾಗಲಿದ್ದು, ಲಾಕ್ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಸ್ಟಾರ್ ಚಿತ್ರ ತಮ್ಮದೇ ಎನ್ನುತ್ತಾರೆ ಆ ಚಿತ್ರದ ನಿರ್ವಪಕ ವಿಖ್ಯಾತ್. ‘ಚಿತ್ರದಲ್ಲಿ ಪ್ರಜ್ವಲ್ ಜತೆಗೆ ದರ್ಶನ್ ಸಹ ಅಭಿನಯಿಸಿದ್ದಾರೆ. ದರ್ಶನ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಒಂದೂವರೆ ವರ್ಷಗಳೇ ಆಗಿವೆ. ಹಾಗಾಗಿ ಲಾಕ್ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ‘ಇನ್ಸ್ಪೆಕ್ಟರ್ ವಿಕ್ರಂ’ ಆಗಲಿದೆ’ ಎನ್ನುತ್ತಾರೆ ವಿಖ್ಯಾತ್. ಇದಲ್ಲದೆ, ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಸಹ ಫೆಬ್ರವರಿ ತಿಂಗಳಲ್ಲೇ ಬಿಡುಗಡೆ ಆಗಲಿದೆ.