ಮುಂಬೈ: ಕರೊನಾ ಮತ್ತು ಲಾಕ್ಡೌನ್ನಿಂದ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಮುಂದೇನು ಎಂಬ ಗೊಂದಲದಲ್ಲಿದ್ದಾರೆ. ಈಗ ಹಿರಿಯ ನಟ ಅಮಿತಾಭ್ ಬಚ್ಚನ್ ಸಹ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿಯೊಂದು ಬಂದಿದೆ. ಕರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, 65 ವರ್ಷ ಮೇಲ್ಪಟ್ಟವರು ಚಿತ್ರೀಕರಣದಲ್ಲಿ ಭಾಗವಹಿಸಬಾರದು ಎಂಬ ನಿಯಮವೊಂದನ್ನು ಜಾರಿ ಮಾಡುವ ಚಿಂತನೆ ನಡೆಯುತ್ತಿದೆ. ಒಂದು ಪಕ್ಷ ಅಂಥದ್ದೊಂದು ನಿಯಮವೇನಾದರೂ ಜಾರಿಗೆ ಬಂದರೆ, ತಾವು ಸಹ ಸೀನಿಯರ್ ಸಿಟಿಜನ್ ಆಗಿರುವುದರಿಂದ, ಇನ್ನು ಮುಂದೆ ಅಭಿನಯಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಹಾಗೇನಾದರೂ ಕೆಲಸ ಹೋದರೆ, ತಮಗೇನಾದರೂ ಪರ್ಯಾಯ ಕೆಲಸ ಸಿಗಬಹುದಾ ಎಂದು ಅಮಿತಾಭ್ ಅಭಿಮಾನಿಗಳಿಗೆ ತಮಾಷೆಯಾಗಿ ಕೇಳಿದ್ದಾರೆ. ಇದಕ್ಕೆ ಅಭಿಮಾನಿಯೊಬ್ಬರು ಒಂದು ಆಫರ್ ಲೆಟರ್ ಸಹ ಕಳಿಸಿಕೊಟ್ಟಿದ್ದಾರೆ.
‘ನಿಮಗೆ ಏನೂ ಮಾಡುವುದಕ್ಕೆ ಇಷ್ಟವಿಲ್ಲದಿದ್ದರೂ, ಏನೋ ಮಾಡುತ್ತಿದ್ದೀನಿ ಎಂದು ನಂಬಿಸಬೇಕೆಂದರೆ, ಅಮೇರಿಕಾದ ಅಧ್ಯಕ್ಷರಾಗಿ. ಇಲ್ಲ, ನೀವು ಮಾಡುವ ಕೆಲಸ ಶಾಶ್ವತವಾಗಿ ಉಳಿಯಬೇಕೆಂಬ ಆಸೆ ಇದ್ದರೆ, ಶಾಂತಿಯ ಮಂತ್ರ ಜಪಿಸಿ. ಹಾಗಾದಾಗ, ನಿಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ’ ಎಂದು ಹೇಳಿದ್ದಾರೆ. ಈ ಆಫರ್ ಲೆಟರ್ ನೋಡಿದ ನಂತರ, ಅಂತೂ ಒಂದು ಕೆಲಸ ಸಿಗುವ ನಂಬಿಕೆ ಇದೆ ಎಂದು ಅಮಿತಾಭ್ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.