ಲಾಕ್ಡೌನ್ ತೆರವಾಗಿದ್ದರಿಂದ ಚಿತ್ರರಂಗ ನಿಧಾನಕ್ಕೆ ಗರಿಗೆದರುತ್ತಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಮಾತ್ರ ಅನುಮತಿ ನೀಡಿರುವುದರಿಂದ, ಹಲವು ಚಿತ್ರತಂಡಗಳು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿವೆ. ಈ ಮಧ್ಯೆ ಕೆ. ಚಂದ್ರಶೇಖರ ರಾವ್ ಅವರ ಸರ್ಕಾರವು, ತೆಲಂಗಾಣದಲ್ಲಿ ಚಿತ್ರೀಕರಣ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಿದ್ದು, ತೆಲುಗು ಚಿತ್ರಗಳ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.
ಈ ಮಧ್ಯೆ, ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಚಿತ್ರೀಕರಣವನ್ನು ಜುಲೈ ಒಂದರಿಂದ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಪ್ರಾರಂಭಿಸುವುದಕ್ಕೆ ಚಿತ್ರತಂಡ ಯೋಚನೆ ಮಾಡಿದ್ದು, ಲಾಕ್ಡೌನ್ ನಂತರ ಚಿತ್ರೀಕರಣ ಪ್ರಾರಂಭಿಸಲಿರುವ ಮೊದಲ ಚಿತ್ರತಂಡ ಎಂಬ ಹೆಗ್ಗಳಿಕೆಗೆ ಫ್ಯಾಂಟಮ್ ಪಾತ್ರವಾಗಲಿದೆ. ಈ ಚಿತ್ರದಲ್ಲಿ ಸುದೀಪ್ ಅವರು ವಿಕ್ರಮ್ ರೋಣ ಎನ್ನುವ ಪಾತ್ರ ಮಾಡುತ್ತಿದ್ದು, ಈಗಾಗಲೇ ಆ ಪಾತ್ರದ ಕುರಿತಾಗಿ ಸುದೀಪ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ವ್ಯಕ್ತವಾಗಿದೆ.
ಜುಲೈ ಒಂದರಿಂದ ಚಿತ್ರೀಕರಣ ಪ್ರಾರಂಭಿಸುತ್ತಿರುವ ಕುರಿತು ವಿಜಯವಾಣಿ ಜತೆಗೆ ಮಾತನಾಡಿದ ನಿರ್ಮಾಪಕ ಜಾಕ್ ಮಂಜು, ಲಾಕ್ಡೌನ್ ಶುರುವುವಾಗುವುದಕ್ಕಿಂತ ಮುನ್ನ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಶೇ 20ರಷ್ಟು ಚಿತ್ರೀಕರಣ ಮುಗಿದಿತ್ತು. ಈ ಮಧ್ಯೆ ಲಾಕ್ಡೌನ್ ಶುರುವಾಗಿದ್ದರಿಂದ, ನಾವೆಲ್ಲಾ ಬೆಂಗಳೂರಿಗೆ ವಾಪಸ್ಸು ಬರಬೇಕಾಯಿತು. ಈಗ ಚಿತ್ರೀಕರಣ ಮಾಡಬಹುದು ಎಂದು ಅಲ್ಲಿನ ಸರ್ಕಾರವೇ ತಿಳಿಸಿರುವುದರಿಂದ, ನಾವು ಸಹ ಚಿತ್ರೀಕರಣ ಮುಂದುವರೆಸುವುದಕ್ಕೆ ನಿರ್ಧರಿಸಿದ್ದೇವೆ. ಅದಕ್ಕೂ ಮುನ್ನ ಸೆಟ್ ಕೆಲಸ ಸ್ವಲ್ಪ ಬಾಕಿ ಇದೆ. ಜೂನ್ 15ರಿಂದ 15 ದಿನಗಳ ಕಾಲ ಸೆಟ್ ಕೆಲಸ ನಡೆಯಲಿದೆ. ಆ ನಂತರ ಜುಲೈ ಒಂದರಿಂದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ ಎನ್ನುತ್ತಾರೆ.
ರಾಮೋಜಿ ಫಿಲಂ ಸಿಟಿಯಲ್ಲಿ ಹಾಕಲಾಗುತ್ತಿರುವ ವಿಶೇಷ ಸೆಟ್ನಲ್ಲೇ ಹಲವು ದಿನಗಳ ಚಿತ್ರೀಕರಣ ನಡೆಯಲಿದೆಯಂತೆ. ಚಿತ್ರದ ಶೇ 30ರಷ್ಟು ಭಾಗ ಅಲ್ಲಿ ಚಿತ್ರೀಕರಣವಾಗಲಿದೆ. ಇದರಲ್ಲಿ ಫೈಟಿಂಗ್ ಸಹ ಸೇರಲಿದೆ. ಇದು ಮುಗಿದ ನಂತರ ಕೇರಳ ಅಥವಾ ಬಾರ್ಕೂರಿನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಯೋಚಿಸುತ್ತಿದ್ದೇವೆ. ಚಿತ್ರದ ಮೂಡ್ಗೆ ತಕ್ಕ ಹಾಗೆ ಒಂದು ಮನೆ ಬೇಕಾಗಿದ್ದು, ಆ ಮನೆಗೆ ಹುಡುಕಾಟ ನಡೆಯುತ್ತಿದೆ ಎನ್ನುತ್ತಾರೆ ಮಂಜು.
ಚಿತ್ರೀಕರಣ ವಿಷಯವಾಗಿ ಇಂದು ಜಾಕ್ ಮಂಜು, ಸುದೀಪ್, ನಿರ್ದೇಶಕ ಅನೂಪ್ ಭಂಡಾರಿ, ಛಾಯಾಗ್ರಾಹಕ ಡೇವಿಡ್ ವಿಲಯಂ ಸೇರಿದಂತೆ ಕೆಲವರು ಸಭೆ ಸೇರಿ, ಚಿತ್ರೀಕರಣ ಪ್ರಾರಂಭಿಸುವ ತೀರ್ಮಾನಕ್ಕೆ ಬಂದಿದ್ದಾರೆ.