ಸಿನಿವಾಣಿ

ಪಾಯಲ್​ಗಿರಲಿ ನಿಮ್ಮೆಲ್ಲರ ಆಶೀರ್ವಾದ

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಪಾಯಲ್ ರಾಧಾಕೃಷ್ಣ ಅವರಿಗೀಗ ‘ನಿಮ್ಮೆಲ್ಲರ ಆಶೀರ್ವಾದ’ ಅತಿ ಅವಶ್ಯವಾಗಿ ಬೇಕಾಗಿದೆ. ಅರೇ, ಅವರೇನು ಮದುವೆ ಆಗ್ತಿದ್ದಾರಾ? ಅಥವಾ ಹೊಸ ಉದ್ದಿಮೆ ಏನಾದರೂ ಶುರು ಮಾಡುತ್ತಿದ್ದಾರಾ ಎಂದುಕೊಳ್ಳಬೇಡಿ. ಬದಲಿಗೆ ಅವರ ಹೊಸ ಸಿನಿಮಾ ಹೆಸರೇ ‘ನಿಮ್ಮೆಲ್ಲರ ಆಶೀರ್ವಾದ’!

ವಿಶೇಷವಾದ ಶೀರ್ಷಿಕೆ ಮೂಲಕವೇ ಸದ್ದು ಮಾಡುತ್ತಿರುವ ಈ ಸಿನಿಮಾದ ಕೆಲಸ ಬಹುತೇಕ ಮುಕ್ತಾಯವಾಗಿದೆ. ಮಂಗಳೂರು ಭಾಗದವರೇ ಸೇರಿ ಈ ಚಿತ್ರವನ್ನು ಹೊರತಂದಿದ್ದಾರೆ. ರವಿಕಿರಣ್ ಈ ಚಿತ್ರ ನಿರ್ದೇಶಿಸಿದರೆ, ವರುಣ್ ಸಿನಿ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ವರುಣ್ ಹೆಗಡೆ ಬಂಡವಾಳ ಹೂಡಿದ್ದಾರೆ.

ಪೊಲೀಸ್ ಕಾಪ್ ಸುತ್ತ ನಡೆಯುವ ಈ ಕಥೆಯಲ್ಲಿ ಪ್ರತೀಕ್ ಶೆಟ್ಟಿ ನಾಯಕನಾಗಿ ನಟಿಸಿದರೆ, ಅವರಿಗಿಲ್ಲಿ ಪಾಯಲ್ ರಾಧಾಕೃಷ್ಣ ಜೋಡಿಯಾಗಿದ್ದಾರೆ. ತಮ್ಮ ಪಾತ್ರದ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಪಾಯಲ್, ‘ಈ ಹಿಂದೆ ನಾನು ನಟಿಸಿದ ‘ಭಿನ್ನ’ ಚಿತ್ರದ ಶೈಲಿಯೇ ಬೇರೆಯಾಗಿತ್ತು. ಇದೀಗ ಅದಕ್ಕೆ ತದ್ವಿರುದ್ಧ ಪಾತ್ರ ನಿಭಾಯಿಸಿದ್ದೇನೆ. ರೊಮ್ಯಾಂಟಿಕ್ ಕಾಮಿಡಿ ಜಾನರ್​ನ ಸಿನಿಮಾದಲ್ಲಿ ಕಾಲೇಜು ಹುಡುಗಿಯಾಗಿ ಗ್ಲಾಮರಸ್ ಲುಕ್​ನಲ್ಲಿ ಕಾಣಿಸಿದ್ದೇನೆ. ಇನ್ನೇನು ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎನ್ನುವ ಅವರು, ತೆಲುಗು, ತಮಿಳಿನ ಸಿನಿಮಾಗಳಲ್ಲಿಯೂ ಬಿಜಿಯಾಗಿದ್ದಾರೆ.

‘ತೆಲುಗಿನ ಆಹಾ ಒಟಿಟಿಯಲ್ಲಿ ‘ತರಗತಿ ಗದಿ ದಾಟಿ’ ವೆಬ್​ಸಿರೀಸ್​ನಲ್ಲಿ ನಟಿಸಿದ್ದೆ. ಒಳ್ಳೇ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಅದರ ಸೀಸನ್ ಎರಡನ್ನು ಮಾಡುವ ಆಲೋಚನೆ ನಡೆಯುತ್ತಿದೆ. ಇದನ್ನು ಬಿಟ್ಟರೆ, ತಮಿಳು ಮತ್ತು ತೆಲುಗಿನ ಒಂದೊಂದು ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದೇನೆ’ ಎನ್ನುತ್ತಾರೆ. ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರಕ್ಕೆ ಶರವಣನ್ ಜಿಎನ್ ಛಾಯಾಗ್ರಹಣ, ಸುನಾದ್ ಗೌತಮ್ ಸಂಗೀತ, ಸುರೇಶ್ ಆಮುಗಂ ಅವರ ಸಂಕಲನವಿದೆ.