pawan kalyan Condolences on Niranjans demise 
ಸಿನಿವಾಣಿ

ಪವನ್​ ಕಲ್ಯಾಣ್​ ಪುಟ್ಟ ಅಭಿಮಾನಿ ನಿಧನ; ಬಾಲಕ ನಿರಂಜನ್​ ಬಗ್ಗೆ ಭಾವುಕ ಪೋಸ್ಟ್​ ಹಂಚಿಕೊಂಡ Andhra DCM

ಪ್ರಮುಖ ಮುಖ್ಯಾಂಶಗಳು

  • ಆಂಧ್ರ ಡಿಸಿಎಂ ಪವನ್​ ಕಲ್ಯಾಣ್ ಪುಟ್ಟ​ ಅಭಿಮಾನಿ ನಿಧನ
  • ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ನಿರಂಜನ್​​
  • ಪುಟ್ಟ ಅಭಿಮಾನಿ ಬಗ್ಗೆ ಎಕ್ಸ್​ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡ ಪವನ್​ ಕಲ್ಯಾಣ್​
pawan kalyan Condolences on Niranjans demise: ಇತ್ತೀಚೆಗೆ ಆಂಧ್ರಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್​ ಅವರು ತಮಗಾಗಿ ಕಾಯುತ್ತಿದ್ದ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿದ್ದರು. ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಆ ಮಗು ನಿಧನವಾಗಿದ್ದು, ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ತೆಲಂಗಾಣದ ಹನುಮಕೊಂಡದಲ್ಲಿರುವ ನಿರಂಜನ್​ಗೆ ಪವನ್​ ಕಲ್ಯಾಣ್​ ಅವರನ್ನು ನೋಡುವ ಮಹದಾಸೆಯಿತ್ತು. ಅದೇ ಕಾರಣದಿಂದ ತಮ್ಮ ಪುಟ್ಟ ಅಭಿಮಾನಿ ನಿವಾಸಕ್ಕೆ ತೆರಳಿ, ಆತನೊಂದಿಗೆ ಸಮಯ ಕಳೆದಿದ್ದರು. ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇಷ್ಟೇ ಅಲ್ಲದೇ ಆತನಿಗಾಗಿ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು.
ಪವನ್​ ಕಲ್ಯಾಣ್​ ಭಾವುಕ ಪೋಸ್ಟ್
ನಿರಂಜನ್ ಇನ್ನಿಲ್ಲ ಎಂಬ ಸುದ್ದಿ ನನ್ನ ಹೃದಯವನ್ನು ತೀವ್ರವಾಗಿ ಕಲಕಿದೆ. ಕೆಲವೇ ದಿನಗಳ ಹಿಂದೆ ಹನುಮಕೊಂಡದಲ್ಲಿರುವ ನಿರಂಜನ್ ಮನೆಗೆ ಭೇಟಿ ನೀಡಿ ಆತನನ್ನು ಭೇಟಿಯಾದ ಕ್ಷಣಗಳು ನನ್ನ ಮನಸ್ಸಿನಲ್ಲಿ ಇನ್ನೂ ಹಸಿಯಾಗಿವೆ. ತೀವ್ರ ಅನಾರೋಗ್ಯದ ನಡುವೆಯೂ ನನಗಾಗಿ ಕಾಯುತ್ತಿದ್ದ ಆ ಕಂದಮ್ಮ... ನನ್ನನ್ನು ನೋಡಿದ ತಕ್ಷಣ ಆ ಮುಖದಲ್ಲಿ ಅರಳಿದ ಆ ಪುಟ್ಟ ನಗು. ಇವೆಲ್ಲವೂ ಎಂದೆಂದಿಗೂ ಮರೆಯಲಾಗದ ನೆನಪುಗಳಾಗಿ ಉಳಿಯುತ್ತವೆ ಎಂದು ಆಂಧ್ರ ಡಿಸಿಎಂ ಪವನ್​ ಕಲ್ಯಾಣ್​ ಅವರು ಬರೆದುಕೊಂಡಿದ್ದಾರೆ.

ಧೈರ್ಯವಂತ ಮಗು

ಅವನ ದೇಹವು ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾಗಲೂ, ಅವನ ಮನಸ್ಸು ಅಪಾರ ಧೈರ್ಯದಿಂದ ಗಟ್ಟಿಯಾಗಿ ನಿಂತಿತ್ತು. ಅಂತಹ ನೋವನ್ನು ಅನುಭವಿಸುತ್ತಿದ್ದಾಗಲೂ ಅವನು ಜೀವನದ ಬಗ್ಗೆ ತೋರಿಸಿದ ಭರವಸೆ ಮತ್ತು ಆತ್ಮವಿಶ್ವಾಸ ಅಮೂಲ್ಯವಾದದ್ದು. ಅಷ್ಟು ಧೈರ್ಯವಂತ ಮಗು ಇಷ್ಟು ಬೇಗ ನಮ್ಮನ್ನು ಅಗಲಿರುವುದು ಅತ್ಯಂತ ನೋವನ್ನುಂಟು ಮಾಡಿದೆ ಎಂದಿದ್ದಾರೆ.
ನಿರಂಜನ್ ಕುಟುಂಬಸ್ಥರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ಭರಿಸಲಾಗದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಪ್ರೀತಿಯ ನಿರಂಜನ್... ನೀನು ತೋರಿಸಿದ ನಗು, ಧೈರ್ಯ, ನೀನು ಹಂಚಿದ ಪ್ರೀತಿ ನನ್ನ ಹೃದಯದಲ್ಲಿ ಎಂದೆಂದಿಗೂ ಉಳಿಯುತ್ತದೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು, (ಏಜೆನ್ಸೀಸ್).