ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ (83) ಅವರು ವಯೋಸಹಜ ಕಾಯಿಲೆಯಿಂದ ಇಂದು (ಅ.20) ಕೊನೆಯುಸಿರೆಳೆದಿದ್ದಾರೆ. ಇಡೀ ಚಿತ್ರರಂಗ ಸಾವಿಗೆ ಕಂಬನಿ ಮಿಡಿದಿದೆ. ಇದೇ ವೇಳೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ( Pawan Kalyan ) ಅವರು ಪತ್ರ ಬರೆದು ಸಂತಾಪ ಸೂಚಿಸಿದ್ದಾರೆ.
ನಟ ಸುದೀಪ್ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿ ಅಧಿಕೃತ ಪತ್ರ ಬರೆದಿರುವ ಡಿಸಿಎಂ ಪವನ್ ಕಲ್ಯಾಣ್, ಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಖ್ಯಾತ ನಟ ಶ್ರೀ ಕಿಚ್ಚ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಸರೋಜಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಮತ್ತು ಪ್ರೋತ್ಸಾಹವಿದೆ ಎಂದು ಸುದೀಪ್ ಹೇಳಿದ್ದರು. ತಾಯಿಯ ನಷ್ಟದಿಂದ ಅವನು ಬೇಗನೆ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. ಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಅಂದಹಾಗೆ ಸುದೀಪ್ ತಾಯಿ ಸರೋಜಾ ಅವರು ಕಳೆದ ಕೆಲ ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತ. ಆದರೆ, ಚಿಕಿತ್ಸೆ ಫಲಿಸದೇ ಭಾನುವಾರ (ಅ.20) ಬೆಳಗ್ಗೆ 7 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಸುದೀಪ್ ಅವರಿಗೆ ತಮ್ಮ ತಾಯಿ ಸರೋಜಾ ಅಂದರೆ ತುಂಬಾ ಪ್ರೀತಿ. ಇತ್ತೀಚೆಗಷ್ಟೆ ಬಿಗ್ಬಾಸ್ ವೇದಿಕೆಯಲ್ಲೂ ತಾಯಿಯನ್ನು ನೆನಪಿಸಿಕೊಂಡಿದ್ದರು. ಈ ಸೀಸನ್ನ ಮೊದಲ ವೀಕೆಂಡ್ ಪಂಚಾಯಿತಿಗೆ ಬಂದಿದ್ದ ಸುದೀಪ್, ನವರಾತ್ರಿ ಹಿನ್ನೆಲೆಯಲ್ಲಿ ಶೇರವಾನಿ ಧರಿಸಿ, ಬರಿಗಾಲಲ್ಲಿ ವೇದಿಕೆ ಹತ್ತಿದ್ದರು. ನವರಾತ್ರಿ ಇದ್ದ ಕಾರಣ ತಾವು ಹೀಗೆ ಡ್ರೆಸ್ ಮಾಡಿಕೊಂಡು ಬಂದಿದ್ದಾಗಿ ಹೇಳಿದ್ದರು. ಕ್ಯಾಮೆರಾ ನೋಡಿಕೊಂಡು ‘ಅಮ್ಮ ನೋಡಿ, ಬರಿಗಾಲಲ್ಲಿ ಬಂದಿದ್ದೀನಿ, ಹಬ್ಬಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಂಡಿದ್ದೀನಿ’ ಎಂದಿದ್ದರು.
ಸಂಜೀವ್ ಮತ್ತು ಸರೋಜಾ ದಂಪತಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು. ನಟ ಸುದೀಪ್ ಚಿಕ್ಕವರು. ಸರೋಜಾ ಅವರ ಮೃತದೇಹವನ್ನು ಜೆಪಿ ನಗರದ ಇಡಲಾಗಿದ್ದು, ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಬಂದು ದರ್ಶನ ಪಡೆಯುತ್ತಿದ್ದಾರೆ.
sleeping-no-exercise-and-eating-whatever-you-like-try-it-for-those-who-are-overweight