‘ಭಾರತೀಯ ಚಿತ್ರರಂಗವೆಂದರೆ ಬರೀ ಬಾಲಿವುಡ್ಡಾ?’ ಇಂಥದ್ದೊಂದು ಪ್ರಶ್ನೆ ಆಗಾಗ ಉದ್ಭವಿಸುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಪ್ರಕಟಿತ ಪದ್ಮ ಪ್ರಶಸ್ತಿಗಳ ಪಟ್ಟಿಯಿಂದಾಗಿ ಮತ್ತೊಮ್ಮೆ ಈ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಜತೆಗೆ ಈ ಪ್ರಶಸ್ತಿಗಳ ಆಯ್ಕೆಯಲ್ಲಿ ನಡೆಯುವ ದಕ್ಷಿಣ ಭಾರತೀಯ ಚಿತ್ರರಂಗದ ಕಡೆಗಣನೆ-ತಾರತಮ್ಯಗಳ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ. ಕೆಸರಿನಲ್ಲೇ ಅರಳುವ ಪದ್ಮಕ್ಕೆ ಒಂಚೂರೂ ಕೆಸರಂಟಿರುವುದಿಲ್ಲ. ‘ಹೆಸರಲ್ಲೇ ಪದ್ಮ ಇರುವ ಈ ಪ್ರತಿಷ್ಠಿತ ಪ್ರಶಸ್ತಿಗಳಿಗೇಕೆ ಈ ಕೊಸರು?’ ಎಂಬುದೆಲ್ಲದರ ಕುರಿತ ಒಂದು ವಿಶ್ಲೇಷಣಾತ್ಮಕ ವಿಶೇಷ ವರದಿ ಇಲ್ಲಿದೆ.
ಬೆಂಗಳೂರು: ‘ನಟಿ ಕಂಗನಾ ರಣಾವತ್ ಜನಿಸುವ ಮೊದಲೇ ಶಿವರಾಜ್ಕುಮಾರ್ ಹೀರೋ ಆಗಿ ಗೆದ್ದಿದ್ದರು. ಅಲ್ಲಿಂದ ಈ 34 ವರ್ಷಗಳಲ್ಲಿ 125 ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಅಂಥ ಹಿರಿಯರ ಕೊಡುಗೆ ಕಡೆಗಣಿಸಿ, ಬಾಲಿವುಡ್ ನಟಿ ಎಂಬ ಕಾರಣಕ್ಕೆ ಕಂಗನಾಗೆ ಪ್ರಶಸ್ತಿ ಕೊಡುವುದು ಎಷ್ಟು ಸರಿ?’ ಇಂಥ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಐದಾರು ದಿನಗಳಿಂದ ಕೇಳಿ ಬರುತ್ತಿರುವುದಷ್ಟೇ ಅಲ್ಲ, ಭಾರಿ ಚರ್ಚೆ ಆಗುತ್ತಿದೆ.
ಅದಕ್ಕೆ ಕಾರಣ, ‘ಪದ್ಮಶ್ರೀ’ ಪ್ರಶಸ್ತಿ. ಈ ಬಾರಿ ನಟಿ ಕಂಗನಾ ರಣಾವತ್, ನಿಮಾಪಕಿ ಏಕ್ತಾ ಕಪೂರ್, ನಿಮಾಪಕ- ನಿರ್ದೇಶಕ ಕರಣ್ ಜೋಹರ್ ಮತ್ತು ಗಾಯಕ ಅದ್ನಾನ್ ಸಾಮಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಆಗಿದ್ದು, ಈ ಆಯ್ಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಕಾರಣ, ಈ ಪ್ರಶಸ್ತಿಗಳು ಕೇವಲ ಬಾಲಿವುಡ್ಗೆ ಸೀಮಿತವಾಗಿರುವುದು. ಎರಡನೆಯದಾಗಿ, ತಮ್ಮದೇ ರೀತಿಯಲ್ಲಿ ಚಿತ್ರರಂಗಕ್ಕೆ ಕೊಡುಗೆ ನೀಡಿದ ಅನೇಕ ಮಹನೀಯರು ಭಾರತೀಯ ಚಿತ್ರರಂಗದಲ್ಲಿದ್ದಾರೆ. ಅವರನ್ನೆಲ್ಲ ಕಡೆಗಣಿಸಿ, ಬಾಲಿವುಡ್ನವರಿಗೆ ಮಾತ್ರ ಈ ಪ್ರಶಸ್ತಿ ನೀಡಿರುವುದು ಪ್ರಾದೇಶಿಕ ತಾರತಮ್ಯವನ್ನು ಎತ್ತಿ ತೋರಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದು ಅಪ್ಪಟ ನಿಜ. ಹಲವು ವರ್ಷಗಳಿಂದ ನಾನಾ ಕಾರಣಗಳಿಗಾಗಿ ಪ್ರಾದೇಶಿಕ ತಾರತಮ್ಯತೆಯ ವಿಚಾರವಾಗಿ ಬಾಲಿವುಡ್ ವಿರುದ್ಧ ಪ್ರಾದೇಶಿಕ ಚಿತ್ರರಂಗಗಳು ಧ್ವನಿ ಎತ್ತುತ್ತಲೇ ಇವೆ. ಈಗ ಪದ್ಮಶ್ರೀ ಪ್ರಶಸ್ತಿಗಳ ವಿಷಯವಾಗಿ ಮತ್ತೊಮ್ಮೆ ಪ್ರಶ್ನೆ ಕೇಳುವಂತಾಗಿದೆ.
ಕಂಗನಾ ಪ್ರತಿಭೆಯ ಬಗ್ಗೆಯಾಗಲೀ ಅಥವಾ ಅವರಿಗೆ ಪ್ರಶಸ್ತಿ ಬಂದಿರುವುದಕ್ಕೆ ಯಾರೂ ಅಪಸ್ವರ ಎತ್ತುತ್ತಿಲ್ಲ. ಅದೇ ರೀತಿ ಪ್ರಶಸ್ತಿ ಪಡೆದ ಇನ್ನೂ ಮೂವರ ಬಗ್ಗೆ ಸಹ ಯಾರಿಗೂ ಅಸಮಾಧಾನವಿಲ್ಲ. ಪ್ರಶಸ್ತಿ ಪಡೆದ ನಾಲ್ವರೂ ಸಾಧಕರು, ಪ್ರಶಸ್ತಿಗೆ ಅರ್ಹರೇ. ಆದರೆ, ಅವರಿಗಿಂಥ ಹಿರಿಯರಾದ ಅನೇಕರು ಭಾರತೀಯ ಚಿತ್ರರಂಗದಲ್ಲಿದ್ದಾರೆ. ಅವರನ್ನೆಲ್ಲ ಕಡೆಗಣಿಸಿ, ಬರೀ ಬಾಲಿವುಡ್ನಲ್ಲಿ ಹೆಚ್ಚು ಜನಪ್ರಿಯ ಆಗಿರುವವರಿಗೆ ಆದ್ಯತೆ ನೀಡಿರುವುದು ಎಲ್ಲರಿಗೂ ಸಹಜವಾಗಿಯೇ ಬೇಸರವಾಗಿದೆ.
ಬರೀ ಪ್ರಶಸ್ತಿಗಳಿಗೆ ಸೀಮಿತವಲ್ಲ!
ಈ ಪ್ರಾದೇಶಿಕ ತಾರತಮ್ಯವು ಬರೀ ಪ್ರಶಸ್ತಿಗಳಿಗೆ ಸೀಮಿತವಲ್ಲ. ಒಟ್ಟಾರೆ ಭಾರತೀಯ ಚಿತ್ರರಂಗವೆಂದರೆ, ಅದು ಹಿಂದಿ ಚಿತ್ರರಂಗ ಅಥವಾ ಬಾಲಿವುಡ್ ಎಂಬಂತಾಗಿದೆ. ಬಾಲಿವುಡ್ ಬಿಟ್ಟರೆ, ಮಿಕ್ಕ ಯಾವ ಚಿತ್ರರಂಗಕ್ಕೆ ಸಿಗಬೇಕಾದ ಮಾನ್ಯತೆಯಾಗಲೀ, ಪ್ರಾತಿನಿಧ್ಯತೆಯಾಗಲೀ ಸಿಗುತ್ತಿಲ್ಲ. ಈ ಕುರಿತು ಈಗಾಗಲೇ ಹಲವು ಭಾಷೆಗಳ ದಿಗ್ಗಜರು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ‘ಚೇಂಜ್ ವಿಥಿನ್’ ಎಂಬ ಹೊಸ ಪರಿಕಲ್ಪನೆಯ ಕುರಿತಾಗಿ ಒಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ, ಚಿತ್ರರಂಗದ ಹಲವು ದಿಗ್ಗಜರು ಮತ್ತು ಜನಪ್ರಿಯ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಎಂದಿನಂತೆ ಅಗ್ರಪಾಲು ಬಾಲಿವುಡ್ನದ್ದಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾರೂಖ್ ಖಾನ್, ಆಮಿರ್ ಖಾನ್, ಕಂಗನಾ ರಣಾವತ್ ಸೇರಿದಂತೆ ಹಲವರು ಭಾಗವಹಿಸಿದ್ದರು. ದಕ್ಷಿಣ ಭಾರತದಿಂದ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಾಲಿವುಡ್ ಸ್ಟಾರ್ಗಳಿಗೆ ಪ್ರಧಾನ ಮಂತ್ರಿಯವರೊಂದಿಗೆ ಸೆಲ್ಪಿ ತೆಗೆದುಕೊಳ್ಳುವ ಅವಕಾಶ ನೀಡಲಾದರೆ, ಇತ್ತ ಭದ್ರತೆಯ ಕಾರಣಗಳ ನೆಪ ಹೇಳಿ ಬಾಲಸುಬ್ರಹ್ಮಣ್ಯಂ ಮುಂತಾದವರ ಮೊಬೈಲ್ಗಳನ್ನು ಕಾರ್ಯಕ್ರಮಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ನೀಡಿರಲಿಲ್ಲ.
ಈ ಕುರಿತು ನೋವಿನಿಂದ ಟ್ವೀಟ್ ಮಾಡಿದ್ದ ಎಸ್.ಪಿ.ಬಿ, ಬಾಲಿವುಡ್ ಮಂದಿಯ ಎದುರು ಪ್ರಾದೇಶಿಕ ಭಾಷೆಯ ಪ್ರತಿನಿಧಿಗಳನ್ನು ನಿರ್ಲಕ್ಷಿಸಿದ್ದು ತಮಗೆ ನೋವಾಗಿದೆ ಎಂದು ಹೇಳಿಕೊಂಡಿದ್ದರು. ‘ಚೇಂಜ್ ವಿಥಿನ್’ ಕಾರ್ಯಕ್ರಮಕ್ಕೆ ಪ್ರಾದೇಶಿಕ ಭಾಷೆಯ ಚಿತ್ರರಂಗದವರನ್ನು ಕಡೆಗಣಿಸಿದ್ದ ಕುರಿತು ನಟ ಜಗ್ಗೇಶ್ ಸಹ ಬೇಸರ ವ್ಯಕ್ತಪಡಿಸಿದ್ದರು. ತೆಲುಗು ನಟ ರಾಮ್ ಚರಣ್ ತೇಜ ಪತ್ನಿ ಉಪಾಸನಾ ಸೇರಿದಂತೆ ಹಲವರು ಪ್ರಾದೇಶಿಕ ಚಿತ್ರರಂಗದವರ ವಿರುದ್ಧದ ತಾರತಮ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಾದೇಶಿಕ ತಾರತಮ್ಯ ಸ್ಪಷ್ಟ
ಕನ್ನಡ ಚಿತ್ರರಂಗದ ಉದಾಹರಣೆಯನ್ನೇ ತೆಗೆದುಕೊಂಡರೆ, ಹಲವು ಸಾಧಕರಿದ್ದಾರೆ. ಶಿವರಾಜ್ಕುಮಾರ್, ಅನಂತ್ ನಾಗ್, ಟಿ.ಎಸ್. ನಾಗಾಭರಣ, ವಿ. ರವಿಚಂದ್ರನ್ ... ಹೀಗೆ ಅನೇಕರಿದ್ದು, ಅವರೆಲ್ಲ ತಮ್ಮದೇ ರೀತಿಯಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಅರ್ಹರು. ಆದರೆ, ಒಬ್ಬರಿಗೂ ಮನ್ನಣೆ ಸಿಗಲಿಲ್ಲ ಎಂಬುದು ಬೇಸರದ ವಿಷಯ. ಇದು ಬರೀ ಈ ವರ್ಷದ ಕಥೆಯಲ್ಲ. ಈ ಹಿಂದೆ ಸಹ ಡಾ. ವಿಷ್ಣುವರ್ಧನ್, ಅಂಬರೀಷ್ ಸೇರಿ ಹಲವು ಅರ್ಹರಿಗೆ ಪ್ರಶಸ್ತಿ ತಪ್ಪಿದ್ದಿದೆ. ಬರೀ ಸಿನಿಮಾ ಕ್ಷೇತ್ರವಷ್ಟೇ ಅಲ್ಲ, ಸುಗಮ ಸಂಗೀತ ಕ್ಷೇತ್ರದ ದಿಗ್ಗಜರಾದ ಮೈಸೂರು ಅನಂತಸ್ವಾಮಿ ಮತ್ತು ಅಶ್ವತ್ಥ್, ರಂಗಭೂಮಿಯ ಮಾಸ್ಟರ್ ಆದ ಹಿರಣ್ಣಯ್ಯ .. ಹೀಗೆ ಹಲವರು ಕೇಂದ್ರದ ಪ್ರಶಸ್ತಿಗಳಿಂದ ಕಾರಣಾಂತರಗಳಿಂದ ವಂಚಿತರಾಗಿದ್ದಾರೆ.
ಇದೆಲ್ಲ ಕಾರಣಗಳಿಂದಾಗಿ ಸಹಜವಾಗಿಯೇ ಹಲವರಿಗೆ ಬೇಸರವಾಗಿದೆ. ಇದು ಹಾಗೆಯೇ ಮಿಸ್ ಆಗಿದ್ದಲ್ಲ, ಇಲ್ಲಿ ಪ್ರಾದೇಶಿಕ ತಾರತಮ್ಯ ಹೆಚ್ಚು ಕೆಲಸ ಮಾಡಿದೆ ಎಂಬುದು ಸ್ಪಷ್ಟ. ಉದಾಹರಣೆಗೆ, ಕಳೆದ ಒಂದು ದಶಕದಲ್ಲೇ ಪದ್ಮಶ್ರೀ ಪ್ರಶಸ್ತಿ ಪಡೆದ ಹಲವು ಬಾಲಿವುಡ್ ಮಂದಿ ಸಿಗುತ್ತಾರೆ.
ಸೈಫ್ ಅಲಿ ಖಾನ್, ರೇಖಾ, ಇರ್ಫಾನ್ ಖಾನ್, ನಾನಾ ಪಾಟೇಕರ್, ಶ್ರೀದೇವಿ, ವಿದ್ಯಾ ಬಾಲನ್, ಪರೇಶ್ ರಾವಲ್, ಸಂಜಯ್ ಲೀಲಾ ಬನ್ಸಾಲಿ, ಪ್ರಿಯಾಂಕಾ ಚೋಪ್ರಾ, ಅಜಯ್ ದೇವಗನ್, ಮನೋಜ್ ಬಾಜಪೇಯಿ, ಖಾದರ್ ಖಾನ್, ಮಧುರ್ ಭಂಡಾರ್ಕರ್ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
ಅದೇ ಪ್ರಾದೇಶಿಕ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರರಂಗಗಳಿಗೆ ಎಷ್ಟು ಪ್ರಶಸ್ತಿಗಳು ಸಿಕ್ಕಿವೆ ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಗಿರೀಶ್ ಕಾಸರವಳ್ಳಿ, ಎಸ್.ಎಸ್. ರಾಜಮೌಳಿ, ಭಾರತಿ ವಿಷ್ಣುವರ್ಧನ್, ಪ್ರಭುದೇವ, ಜಯರಾಮ್ ಪ್ರಿಯದರ್ಶನ್ಅವರಂಥ ಬೆರಳಣಿಕೆಯಷ್ಟು ಮಂದಿ ಮಾತ್ರ ಕಾಣಿಸುತ್ತಾರೆ. ಬಾಲಿವುಡ್ನಲ್ಲಿ ಅಷ್ಟೊಂದು ಮಂದಿಗೆ ಪ್ರಶಸ್ತಿ ಸಿಕ್ಕಿರುವಾಗ, ಬೇರೆ ಭಾಷೆಯ ಚಿತ್ರರಂಗದ ಗಣ್ಯರಿಗೆ ಮಾತ್ರ ಯಾಕೆ ಈ ತಾರತಮ್ಯ ಎಂಬ ಪ್ರಶ್ನೆ ಬರದೇ ಇರುವುದಿಲ್ಲ.
ಹಿರಿಯರಿಗಿಂತ ಮೊದಲೇ ಕಿರಿಯರ ಆಯ್ಕೆ
ಇಲ್ಲಿ ಇನ್ನೂ ಒಂದು ವಿಷಯ ಗಮನಿಸಬೇಕು. ಪ್ರಮುಖವಾಗಿ, ಬಾಲಿವುಡ್ನಲ್ಲಿ ಪ್ರಶಸ್ತಿ ಪಡೆದವರೆಲ್ಲರೂ ಅದ್ಭುತ ಸಾಧಕರಲ್ಲ, ಜನಪ್ರಿಯತೆಯ ಆಧಾರದ ಮೇಲೂ ಅಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ ಎಂಬುದನ್ನು ಗಮನಿಸಬಹುದು. ಸೈಫ್ ಅಲಿ ಖಾನ್ಗೆ ಪ್ರಶಸ್ತಿ ಬಂದ ವರ್ಷವೇ ಹಿರಿಯರಾದ ರೇಖಾ ಅವರಿಗೂ ಪ್ರಶಸ್ತಿ ಸಿಗುತ್ತದೆ. ಸೈಫ್ ಅಲಿ ಖಾನ್ ಚಿತ್ರರಂಗಕ್ಕೆ ಬರುವ 15 ವರ್ಷಗಳ ಮುಂಚೆಯೇ ರೇಖಾ ಚಿತ್ರರಂಗಕ್ಕೆ ಬಂದವರು.
ನೂರಾರು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ತಮ್ಮದೇ ಛಾಪನ್ನು ಮೂಡಿಸಿದವರು. ಆದರೂ ಅವರು ತಮಗಿಂತ ಎಲ್ಲ ವಿಷಯಗಳಲ್ಲೂ ಕಿರಿಯರಾದವರ ಜತೆ ಪ್ರಶಸ್ತಿ ಸ್ವೀಕರಿಸಬೇಕಾಗುತ್ತದೆ. ಇನ್ನು ಆ ಪ್ರಶಸ್ತಿಗೆ ಅವರಂತೆಯೇ ಇನ್ನೂ ಮುಂಚೆಯೇ ಭಾಜನರಾಗಬೇಕಿದ್ದ ಶ್ರೀದೇವಿ, ನಾನಾ ಪಾಟೇಕರ್, ಖಾದರ್ ಖಾನ್ ಮುಂತಾದ ಹಲವು ಸಾಧಕರಿಗೆ ಇನ್ಯಾವಾಗಲೋ ಪ್ರಶಸ್ತಿ ಸಿಗುತ್ತದೆ.
ಇನ್ನು ಬಾಲಿವುಡ್ನಲ್ಲೇ ಹಲವರು ಅರ್ಹರಿದ್ದರೂ ವಿದ್ಯಾ ಬಾಲನ್, ಕಾಜೋಲ್, ಪ್ರಿಯಾಂಕಾ ಚೋಪ್ರಾ, ಟಬು ಮುಂತಾದ ಜನಪ್ರಿಯ ಅಥವಾ ಸ್ಟಾರ್ ಕಲಾವಿದರಿಗೆ ಪ್ರಶಸ್ತಿ ನೀಡಲಾಗುತ್ತದೆ. ಹಾಗಾಗಿ ಇಲ್ಲಿ ಪ್ರಾದೇಶಿಕ ತಾರತಮ್ಯದ ಜತೆಗೆ ಸ್ಟಾರ್ ಕಲಾವಿದರಿಗೆ ಮಣೆ ಹಾಕುತ್ತಿರುವ ಪರಿಪಾಠವನ್ನು ಗಮನಿಸಬಹುದು. ಜನಪ್ರಿಯತೆಗೆ ಮಣೆ ಹಾಕುವುದೋ ಅಥವಾ ಪ್ರಾದೇಶಿಕ ತಾರತಮ್ಯವೋ ಅಥವಾ ಇನ್ಯಾವ ಕಾರಣವೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರತಿಭಾವಂತ ಕನ್ನಡಿಗರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳ ಮನ್ನಣೆ ಸಿಗುತ್ತಿಲ್ಲ ಎನ್ನುವುದು ನೋವಿನ ವಿಷಯ.
ಈ ಕುರಿತು ಮೊದಲು ಶಿವರಾಜ್ಕುಮಾರ್ ಅಭಿಮಾನಿಗಳು ತಮ್ಮ ಬೇಸರ ಹೊರಹಾಕಿದರು. ಅದಕ್ಕೆ ಚಿತ್ರರಂಗದ ಕೆಲವರು ಧ್ವನಿಗೂಡಿಸಿದರು. ಬಹುಶಃ ಎಲ್ಲರೂ ಸುಮ್ಮನಿದ್ದುಬಿಟ್ಟಿದ್ದರೆ, ವಿಷಯ ಚರ್ಚೆಗೇ ಬರುತ್ತಿರಲಿಲ್ಲ. ಬರೀ ಕನ್ನಡಕ್ಕಷ್ಟೇ ಅಲ್ಲ, ಬಾಲಿವುಡ್ ಹೊರತುಪಡಿಸಿ ಬೇರೆ ಭಾಷೆಯ ಚಿತ್ರರಂಗಗಳಿಗೆ ಆಗುತ್ತಿರುವ ತಾರತಮ್ಯ ಮತ್ತು ಅವಮಾನದ ಬಗ್ಗೆ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ, ಈಗ ಸಣ್ಣದೊಂದು ಜಾಗೃತಿ ಶುರುವಾಗಿದೆ. ಈ ವರ್ಷವಲ್ಲದಿದ್ದರೂ ಮುಂದಿನ ವರ್ಷಗಳಲ್ಲಾದರೂ ಭಾರತದ ಈ ಅತ್ಯುನ್ನತ ಪ್ರಶಸ್ತಿಗಳ ಆಯ್ಕೆ ವಿಚಾರದಲ್ಲಿ ಸುಧಾರಣೆ ಆಗುತ್ತದಾ ಎಂಬುದನ್ನು ನೋಡಬೇಕಿದೆ.