ಸಿನಿವಾಣಿ

ಮನಗೆದ್ದ ‘ಔಟ್ ಆಫ್​ ಸಿಲಬಸ್’: ಪ್ರದೀಪ್ ದೊಡ್ಡಯ್ಯ ನಟಿಸಿ, ನಿರ್ದೇಶಿಸಿರುವ ಸಿನಿಮಾ

ಬೆಂಗಳೂರು: ಪ್ರದೀಪ್ ದೊಡ್ಡಯ್ಯ ನಟಿಸಿ, ನಿರ್ದೇಶಿಸಿರುವ ‘ಔಟ್ ಆಫ್ ಸಿಲಬಸ್’ ಚಿತ್ರ ಡಿ.27ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆದ್ದಿದೆ. ಪ್ರದೀಪ್ ದೊಡ್ಡಯ್ಯಗೆ ಹೃತಿಕಾ ಶ್ರೀನಿವಾಸ್ ಜೋಡಿಯಾಗಿದ್ದು, ಯೋಗರಾಜ್ ಭಟ್, ಅಚ್ಯುತ್‌ಕುಮಾರ್, ಜಹಾಂಗೀರ್, ಮಹಾಂತೇಶ ಹಿರೇಮಠ ಮುಖ್ಯಭೂಮಿಕೆಯಲ್ಲಿದ್ದಾರೆ. ರೊಮ್ಯಾಂಟಿಕ್, ಕಾಮಿಡಿ ಜಾನರ್ ಈ ಚಿತ್ರವು ಕಾಲೇಜು ಜೀವನ, ದಾಂಪತ್ಯ, ಬದುಕು ಹೀಗೆ ನಾನಾ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ. ಬಿಡುಗಡೆಯಾದ ಮೊದಲ ದಿನ 20 ಮಲ್ಟಿಪ್ಲೆಕ್ಸ್‌ನಲ್ಲಿ ಸಾಧಾರಣ ಪ್ರದರ್ಶನದೊಂದಿಗೆ ಆರಂಭವಾಗಿದ್ದ ಈ ಸಿನಿಮಾ ಇದೀಗ ದಿನದಿಂದ ದಿನಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರತಿ ಥಿಯೇಟರ್‌ನಲ್ಲಿ ಶೇ.80 ಸೀಟುಗಳು ಭರ್ತಿಯಾಗುತ್ತಿರುವುದು ಇದಕ್ಕೆ ಸಾಕ್ಷಿ. ಜ.1ರಂದು ಬೆಂಗಳೂರಿನ ಗೋಪಾಲನ್ ಹಾಗೂ ಓರಾಯಾನ್ ಮಾಲ್ ಪ್ರದರ್ಶನಗಳು ಹೌಸ್‌ಫುಲ್ ಕಂಡಿದ್ದವು. ಸದ್ಯ ಚಿತ್ರವು ಯಶಸ್ವಿ ಒಂದು ವಾರ ಪೂರೈಸಿ, ಎರಡನೇ ವಾರಕ್ಕೆ ಹೆಜ್ಜೆಯಿಟ್ಟಿದೆ. ಬಹುತೇಕ ಜನರು ಆನ್‌ಲೈನ್ ಬುಕಿಂಗ್‌ನಲ್ಲಿ ಎಷ್ಟು ಸೀಟ್ ಬುಕ್ ಮಾಡಲಾಗಿದೆ ಎಂಬುದನ್ನು ನೋಡಿಕೊಂಡು ಚಿತ್ರ ವೀಕ್ಷಿಸಲು ಆಸಕ್ತಿ ವಹಿಸುತ್ತಾರೆ. ಆದರೆ, ‘ಔಟ್ ಆಫ್ ಸಿಲಬಸ್’ ಪ್ರೇಕ್ಷಕರು ನೇರವಾಗಿ ಥಿಯೇಟರ್‌ಗೆ ಬಂದು ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿ, ಸಿನಿಮಾ ವೀಕ್ಷಿಸುತ್ತಿರುವುದು ವಿಶೇಷ. ಎಲ್ಲ ಮಾಧ್ಯಮಗಳಿಂದ ಚಿತ್ರಕ್ಕೆ ಉತ್ತಮ ವಿಮರ್ಶೆ ಬಂದಿದ್ದು, 5ರಲ್ಲಿ 3.5 ಸರಾಸರಿ ರೇಟಿಂಗ್ ನೀಡಲಾಗಿದೆ. ಇದು ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಇತರ ಸಿನಿಮಾಗಳಿಗಿಂತ ಹೆಚ್ಚು ಎನ್ನುವುದು ಚಿತ್ರತಂಡದ ಅನಿಸಿಕೆ. ಎಡಿ6 ಎಂಟರ್‌ಟೈನ್‌ಮೆಂಟ್ ಬ್ಯಾನರಡಿಯಲ್ಲಿ ನಿರ್ಮಾಪಕಿ ಕೆ.ವಿಜಯಕಲಾ ಸುಧಾಕರ್ ನಿರ್ಮಿಸಿರುವ ಔಟ್ ಆಫ್ ಸಿಲಬಸ್’ ಚಿತ್ರವು ಸ್ಲೀಪರ್ ಹಿಟ್ ಕಂಡಿದೆ.