ಬೆಂಗಳೂರು: ಸದ್ಯ ಸ್ಯಾಂಡಲ್ವುಡ್ನ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಟ ಕಾರ್ತಿಕ್ ಜಯರಾಮ್ (ಜೆಕೆ), ಇತ್ತೀಚೆಗಷ್ಟೇ ‘ಪುಷ್ಪ ಐ ಹೇಟ್ ಟಿಯರ್ಸ್’ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿ ಬಂದಿದ್ದರು.
ಇದೀಗ ಸದ್ದಿಲ್ಲದೆ ಮತ್ತೊಂದು ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ. ಮೊದಲ ಸಲ ಕಾಲಿವುಡ್ಗೆ ಪ್ರಯಾಣ ಬೆಳೆಸಿರುವ ಜೆಕೆ, ‘ಮಾಳಿಗೈ’ (ಕನ್ನಡ ಅರ್ಥ ಕೋಟೆ) ಶೀರ್ಷಿಕೆಯ ಸಿನಿಮಾದಲ್ಲಿ ನಟಿಸಿದ್ದಾರೆ.
ಈಗಾಗಲೇ ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಆಂಡ್ರಿಯಾ ಜರೆಮಿಯ ಜೆಕೆಗೆ ಜೋಡಿಯಾಗಿದ್ದಾರೆ. ಅಂದಹಾಗೆ ‘ಮಾಳಿಗೈ’ ಫ್ಯಾಂಟಸಿ-ಡ್ರಾಮಾ ಶೈಲಿಯ ಸಿನಿಮಾ. 2018ರಲ್ಲಿಯೇ ಶುರುವಾಗಿದ್ದ ಈ ಸಿನಿಮಾ, ಕಳೆದ ವರ್ಷ ಪೂರ್ಣ ಚಿತ್ರೀಕರಣ ಮುಗಿಸಿಕೊಂಡಿತ್ತು. ಶೀರ್ಷಿಕೆ ಅನಾವರಣದ ವೇಳೆ ಚಿತ್ರದ ಟೀಸರ್ವೊಂದನ್ನು ಬಿಡುಗಡೆ ಮಾಡಿಕೊಂಡು ಸಿನಿಮಾದಲ್ಲಿ ಏನಿರಲಿದೆ ಎಂಬುದರ ಬಗ್ಗೆ ಸಣ್ಣ ಸುಳಿವು ನೀಡಿತ್ತು.
ಈಗ ಬಿಡುಗಡೆ ಹಂತಕ್ಕೆ ಬಂದು ನಿಂತಿದ್ದು, ಮೊದಲ ತಮಿಳು ಸಿನಿಮಾ ಆಗಿರುವುದರಿಂದ ಅದಕ್ಕೆ ಸಿಗುವ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ ಜೆಕೆ. ‘ಫ್ಯಾಂಟಸಿ-ಡ್ರಾಮಾ ಶೈಲಿಯ ಸಿನಿಮಾ ಇದು. ಎರಡು ಕಾಲಘಟ್ಟದಲ್ಲಿ ಕಥೆ ಸಾಗಲಿರುವುದರಿಂದ ಒಂದರಲ್ಲಿ ರಾಜನ ಮಗನಾಗಿ, ಮತ್ತೊಂದರಲ್ಲಿ ಪ್ರಸ್ತುತ ಕಾಲಘಟ್ಟದ ಉದ್ಯಮಿಯಾಗಿಯೂ ಕಾಣಿಸಿಕೊಳ್ಳಲಿದ್ದೇನೆ. ಚಿತ್ರದ ಬಹುತೇಕ ಶೂಟಿಂಗ್ ಗುಜರಾತ್ನ ವಡೋದರದಲ್ಲಿ ನಡೆದಿದೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ’ ಎನ್ನುತ್ತಾರೆ. ವಿನೋದ್ ಪ್ರಭಾಕರ್ ಅವರ ‘ದಿಲ್’ ಸಿನಿಮಾ ಸೇರಿ ಕನ್ನಡದ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ದಿಲ್ ಸತ್ಯ, ‘ಮಾಳಿಗೈ’ ಚಿತ್ರಕ್ಕೂ ಆಕ್ಷನ್-ಕಟ್ ಹೇಳುತ್ತಿದ್ದಾರೆ.
ಅಷ್ಟೇ ಅಲ್ಲ ಕನ್ನಡದ ಸಂಗೀತ ನಿರ್ದೇಶಕ ಕೃಪಾಕರ್ ಇಲ್ಲಿಯೂ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್, ನಟ ಅಶುತೋಷ್ ರಾಣಾ, ಅಲಿ ತಾರಾಗಣದಲ್ಲಿದ್ದಾರೆ. ಇನ್ನು ರಮೇಶ್ ಅರವಿಂದ್, ಕಮಲ್ ಹಾಸನ್ ಸೇರಿ ಹಲವು ಸ್ಟಾರ್ ಹೀರೋಗಳ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ಆಂಡ್ರಿಯಾ ‘ಮಾಳಿಗೈ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಮತ್ತು ಮಹಾರಾಣಿ ಅವತಾರದಲ್ಲಿ ಎದುರಾಗಲಿದ್ದಾರೆ. ಕಮಲ್ ಬೊಹ್ರಾ, ರಾಜೇಶ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.