| ಹರ್ಷವರ್ಧನ್ ಬ್ಯಾಡನೂರು
ಆತ ಕುಮಾರ್ ಕಂಸಾಳೆ (ಗೌರಿಶಂಕರ್). ಆತನ ತಂದೆ ಧರ್ಮತೇಜ ಕಂಸಾಳೆ (ಬಲರಾಜವಾಡಿ) ದುಷ್ಟರ, ಭ್ರಷ್ಟರ ವಿರುದ್ಧ ಹೋರಾಡುತ್ತಲೇ ಸಾವಿಗೀಡಾಗಿರುತ್ತಾರೆ. ಅಪ್ಪನ ಹಾದಿಯಲ್ಲಿ ಸಾಗುವ ವಕೀಲ ಕುಮಾರ್ಗೆ ಕಾನೂನೇ ಅಸ್ತ್ರ. ಆಸ್ಪತ್ರೆಯಲ್ಲಿ ವಿನಾಕಾರಣ ಟೆಸ್ಟ್ಗಳಿಗೆ ಹಣ ಕೀಳಲಿ, ಮೆಡಿಕಲ್ ಶಾಪ್ಗಳಲ್ಲಿ ನಕಲಿ ಔಷಧ ಕೊಡಲಿ, ಅಷ್ಟೇ ಅಲ್ಲ 100 ಗ್ರಾಮ್ ಕಬಾಬ್ ಕಡಿಮೆಯಾಗಲಿ, ಆಟೋ ಚಾಲಕ ಹೆಚ್ಚು ಹಣ ಕೇಳಿದರೂ ಕೇಸ್ ಜಡಿದು ಕಾನೂನು ಮೂಲಕ ಪಾಠ ಕಲಿಸುವ ಗಟ್ಟಿಗ. ಇಂತಹ ಕುಮಾರ್ ಒಮ್ಮೆ ವಿಧಾನಸೌಧಕ್ಕೆ ಹೋಗಲು ಯತ್ನಿಸಿದಾಗ, ಪೊಲೀಸರು ಗೇಟ್ ಒಳಗೆ ಬಿಡುವುದಿಲ್ಲ. ಅದರ ಬೆನ್ನಲ್ಲೇ ಟಿವಿ ಡಿಬೇಟ್ ಒಂದರಲ್ಲಿ ಮಿನಿಸ್ಟರ್ ಒಬ್ಬ ವಿಧಾನಸೌಧ ಜನರ ಆಸ್ತಿ ಎನ್ನುತ್ತಾನೆ. ಅದನ್ನೇ ಮುಂದಿಟ್ಟುಕೊಂಡು ಕಂಸಾಳೆ, "ನನಗೂ ವಿಧಾನಸೌಧದಲ್ಲಿ ಪಾಲು ಬೇಕು' ಅಂತ ಕೇಸ್ ಹಾಕಿ ಕಹಳೆ ಊದಿಬಿಡುತ್ತಾನೆ. ಮತ್ತೊಂದೆಡೆ ಸಿಎಂ ಸದಾಶಿವರಾವ್ಗೆ (ನರಸಿಂಹಮೂರ್ತಿ) ಗಂಡಾಂತರದಿಂದ ಪಾರಾಗಲು ಮೂರು ತಿಂಗಳು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಗುರುಗಳು ಹೇಳುತ್ತಾರೆ. ಅದಾಗಿ ಕೆಲ ದಿನಗಳಲ್ಲೇ ಸಿಎಂ ಅರ್ಥಾತ್ ಕಾಮನ್ಮ್ಯಾನ್ ಕಂಸಾಳೆ, ಸಿಎಂ ಅರ್ಥಾತ್ ಚೀಫ್ ಮಿನಿಸ್ಟರ್ ಸದಾಶಿವರಾವ್ ಮುಖಾಮುಖಿಯಾಗುತ್ತಾರೆ. ಮುಂದೆ ನಡೆಯುವ ಸಂಘರ್ಷವೇ "ಕಾಮನ್ಮ್ಯಾನ್' ಕಹಾನಿ.
ಇದು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ 106ನೇ ಸಿನಿಮಾ. ನಾಲ್ಕು ದಶಕಗಳ ಸುದೀರ್ ಜರ್ನಿಯಲ್ಲಿ ನಾನಾ ಜಾನರ್ ಕಥೆ ಹೇಳಿರುವ ಅವರು ಈ ಬಾರಿ ಆ್ಯಕ್ಷನ್ ಪೊಲಿಟಿಕಲ್ ಕಾಮಿಡಿ ನಿರೂಪಿಸಿದ್ದಾರೆ. ಒನ್ಲೈನ್ ಅದ್ಭುತ ಅಂತನ್ನಿಸಿದರೂ, ಮೇಕಿಂಗ್ ಮತ್ತು ಚಿತ್ರಕಥೆಗೆ ಮತ್ತಷ್ಟು ಒತ್ತು ನೀಡುವ ಅವಕಾಶವಿತ್ತು. ಆದರೂ ಟ್ವಿಸ್ಟ್&ರ್ಟನ್ಗಳ ಜತೆ ಕಮರ್ಷಿಯಲ್ ಅಂಶಗಳಿರುವ ಕಾರಣ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ನಾಯಕ ಗೌರಿಶಂಕರ್ ಒನ್ ಮ್ಯಾನ್ ಆರ್ಮಿಯಂತೆ ಒಬ್ಬರೇ ಸಂಪೂರ್ಣ ಜವಾಬ್ದಾರಿ ಹೊತ್ತು ಕಥೆಯನ್ನು ದಾಟಿಸಲು ಯತ್ನಿಸಿದ್ದಾರೆ. "ಕೆರೆಬೇಟೆ'ಯ ಹಳ್ಳಿ ಹುಡುಗನ ಇಮೇಜ್ನಿಂದ ಹೊರಬಂದು ಇಲ್ಲಿ ಕ್ಲಾಸ್&ಮಾಸ್ ಎರಡೂ ಶೇಡ್ಗಳಲ್ಲಿ ಮಿಂಚಿದ್ದಾರೆ. ಅವರಿಗೆ ಖಳನಾಯಕನಾಗಿ ನರಸಿಂಹಮೂರ್ತಿ ಸವಾಲು ಹಾಕಿದ್ದಾರೆ. ಪ್ರಕಾಶ್ ತೂಮಿನಾಡು ಅಲ್ಲಲ್ಲಿ ನಗಿಸುತ್ತಾರೆ. "ಬೆಟೊನಾ ಬೆಟೊನಾ', "ಎದೆಯ ಮೂಲೆ' ಹಾಡುಗಳು ಅಂದವಾಗಿವೆ. ಒಟ್ಟಾರೆ "ಕಾಮನ್ಮ್ಯಾನ್'ಅನ್ನು ಒಮ್ಮೆ ನೋಡಲಡ್ಡಿಯಿಲ್ಲ.