ಬೆಂಗಳೂರು: ಕೆಲವು ಸಾಕ್ಷ್ಯಚಿತ್ರಗಳ ನಿರ್ದೇಶನದ ಜತೆಗೆ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಗೌತಮ್ ರವಿ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಲು ಸಿದ್ಧರಾಗಿದ್ದಾರೆ. ‘ಓಂ ಸತ್ಯಂ ಶಿವಂ’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದ್ದು, ಇತ್ತೀಚೆಗೆ ಸಂಗೀತ ನಿರ್ದೇಶಕ ವಿ.ಮನೋಹರ್ ಅನಾವರಣಗೊಳಿಸಿದರು. ಅಧ್ಯಾತ್ಮ ಹಾಗೂ ವಿಜ್ಞಾನದ ಸುತ್ತ ಸುತ್ತುವ ಈ ಕಥೆಯಾಗಿದೆ.
ನಿರ್ದೇಶಕ ಗೌತಮ್, ‘ಆದಿಯೋಗಿಯ ಸ್ಫೂರ್ತಿ ಪಡೆದು ಕಥೆ ಮಾಡಲಾಗಿದೆ. ಇದು ಅಧ್ಯಾತ್ಮ ಹಾಗೂ ವಿಜ್ಞಾನಕ್ಕೆ ಸೇತುವೆಯಾಗಲಿದೆ. ಸಿನಿಮಾದಲ್ಲಿ ಒಂದು ಘಟನೆ ನಡೆಯುತ್ತದೆ. ಅದಕ್ಕೆ ಕಾರಣ ಏನು ಎಂಬುದನ್ನು ವಿಜ್ಞಾನದ ಮೂಲಕ ಹುಡುಕಾಟ ನಡೆಯುತ್ತದೆ. ಈಗಾಗಲೇ ಚಿತ್ರದ ಟೈಟಲ್ ಅನೌನ್ಸ್ ಮಾಡಲಾಗಿದ್ದು, ಕಲಾ ಬಳಗ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಬೆಂಗಳೂರು, ಮಂಗಳೂರು, ಉಡುಪಿ ಸೇರಿ ವಿವಿಧೆಡೆ ಸುಮಾರು 50 ದಿನಗಳ ಕಾಲ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ. ಹಸಿರು ವಾತಾವರಣ ಕಥೆಗೆ ಪೂರಕವಾಗಿರುವುದರಿಂದ ಜೂನ್‌ನಿಂದ ಶೂಟಿಂಗ್ ಆರಂಭಿಸಲಿದ್ದೇವೆ. ಸದ್ಯ ಕನ್ನಡದಲ್ಲಿ ಮಾತ್ರ ಸಿನಿಮಾ ನಿರ್ಮಾಣವಾಗುತ್ತಿದೆ. ಹೆಚ್ಚು ರೀಚ್ ಆದರೆ ಬೇರೆ ಭಾಷೆಗಳಲ್ಲಿ ತರುತ್ತೇವೆ. ಒಂದು ಹೊಸ ವಿಭಿನ್ನ ಕಥೆ ಇದಾಗಿದ್ದು, ಈ ತರ ಕಥೆಗಳು ಕನ್ನಡದಲ್ಲಿ ಬಂದಿಲ್ಲ’ ಎಂದು ಮಾಹಿತಿ ನೀಡುತ್ತಾರೆ. ತರುಣ್ ಸೈಮಂಡ್ಸ್ ಸಂಗೀತ ಚಿತ್ರಕ್ಕಿದೆ.