- ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾದ ಸೈಕಾಲಾಜಿಕಲ್ ಹಾರರ್ ಸಿನಿಮಾ ಒಬ್ಸೆಷನ್
- ಪ್ರೈಮ್ ಮತ್ತು ಆಪಲ್ ಟಿವಿಯಲ್ಲಿ ಸಿನಿಮಾ ಲಭ್ಯ, ಆದರೆ ಉಚಿತವಾಗಿ ನೋಡುವ ಅವಕಾಶವಿಲ್ಲ
- ಸಿನಿಮಾ ನೋಡಲು 24.99 ಡಾಲರ್ ಹಾಗೂ ಬಾಡಿಗೆಗೆ ಪಡೆಯಲು 19.99 ಡಾಲರ್ ದರ ಪಾವತಿ ಮಾಡಬೇಕು
Obsession on OTT:
ವಿಶ್ವದಾದ್ಯಂತ ಭಾರಿ ಪ್ರತಿಕ್ರಿಯೆ ಗಳಿಸಿದ್ದ ಹಾರರ್ ಮತ್ತು ಸೈಕಲಾಜಿಕಲ್ ಸಿನಿಮಾ ಒಬ್ಸೆಷನ್, ಬಾಕ್ಸ್ ಆಫೀಸ್ನಲ್ಲಿ 300 ಮಿಲಿಯನ್ ಡಾಲರ್ಗೂ(2,500 ಕೋಟಿ) ಹೆಚ್ಚು ಹಣ ಬಾಚಿಕೊಂಡ ನಂತರ ಸದ್ಯ ಒಟಿಟಿ ಫ್ಲ್ಯಾಟ್ಫಾರ್ಮ್ನಲ್ಲಿ ಸದ್ದು ಮಾಡಲು ರೆಡಿಯಾಗಿದೆ. 26 ವರ್ಷದ ಯೂಟ್ಯೂಬರ್ ಕರ್ರಿ ಬಾಕರ್ ನಿರ್ದೇಶನದ ಈ ಸಿನಿಮಾವು ಅಮೆಜಾನ್ ಮತ್ತು ಆಪಲ್ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ. ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ ಅದೇನೆಂದರೆ, ಹಣ ಕೊಟ್ಟು ಸಿನಿಮಾ ನೋಡಬೇಕಾದ ಪರಿಸ್ಥಿತಿ ಇದೆ.
ಒಬ್ಸೆಷನ್ ಎಲ್ಲಿ ನೋಡಲು ಲಭ್ಯ
ಹೌದು, ಒಬ್ಸೆಷನ್ ಸಿನಿಮಾವನ್ನು ಮನೆಯಲ್ಲಿ ಕೂತು ಕುಟುಂಬಸ್ಥರ ಜೊತೆಗೆ ನೋಡಬೇಕು ಎಂದು ಕಾದಿದ್ದವರಿಗೆ ಗುಡ್ನ್ಯೂಸ್ ಹಾಗೂ ಬ್ಯಾಡ್ನ್ಯೂಸ್ ಎರಡೂ ಇದೆ. ಒಂದು ಸಿಹಿಸುದ್ದಿ ಎಂದರೆ ಒಟಿಟಿಯಲ್ಲಿ ರಿಲೀಸ್ ಆಗಿದ್ದು. ಮತ್ತೊಂದು ಬ್ಯಾಡ್ನ್ಯೂಸ್ ಎಂದರೆ, ಪ್ರೈಮ್ ವಿಡಿಯೋ ಮತ್ತು ಆಪಲ್ ಟಿವಿ ಅಪ್ಲಿಕೇಷನ್ನಲ್ಲಿ ಸಿನಿಮಾ ಒಟಿಟಿ ಸಬ್‌ಸ್ಕ್ರಿಪ್ಷನ್ ಭಾಗವಾಗಿ ಉಚಿತವಾಗಿ ಸಿಗುತ್ತಿಲ್ಲ. ಬದಲಿಗೆ, ವೀಕ್ಷಕರು ಇದನ್ನುಬಾಡಿಗೆಗೆ ಪಡೆದು ಅಥವಾ ಖರೀದಿಸಿ ನೋಡಬೇಕಾಗುತ್ತದೆ
ಖರೀದಿ ದರ ಎಷ್ಟು?
ಅತಿ ದೊಡ್ಡ ಹಾರರ್ ಸಿನಿಮಾ ಎನಿಸಿಕೊಂಡ ಇದನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಸಲು 24.99 ಡಾಲರ್ ಹಾಗೂ ಬಾಡಿಗೆಗೆ ಪಡೆಯಲು 19.99 ಡಾಲರ್ ದರ ನಿಗದಿಪಡಿಸಲಾಗಿದೆ. ಚಿತ್ರದ ತಯಾರಕರು ಇದೇ ತಿಂಗಳ ಕೊನೆಯಲ್ಲಿ ಪೂರ್ಣ ಪ್ರಮಾಣದ ಉಚಿತ ಒಟಿಟಿ ಸ್ಟ್ರೀಮಿಂಗ್ ಬಿಡುಗಡೆಯನ್ನು ಘೋಷಿಸುವ ನಿರೀಕ್ಷೆಯಿದ್ದು, ಅಧಿಕೃತ ದಿನಾಂಕ ಇನ್ನೂ ಪ್ರಕಟವಾಗಿಲ್ಲ.ಇನ್ನು ಈ ಚಿತ್ರದ ಡಿವಿಡಿ (DVD), ಬ್ಲೂ-ರೇ ಮತ್ತು 4K UHD ಭೌತಿಕ ಆವೃತ್ತಿಗಳು ಜುಲೈ 14 ರಂದು ಬಿಡುಗಡೆಯಾಗಲಿದ್ದು, ಮುಂಬರುವ ವಾರಗಳಲ್ಲಿ ಇದು 'ಪೀಕಾಕ್' ಒಟಿಟಿ ಪ್ಲಾಟ್‌ಫಾರ್ಮ್‌ಗೂ ಬರಲಿದೆ.
ಬೋನಸ್ ಕಾಂಟೆಂಟ್ ಲಭ್ಯ
ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಖರೀದಿ ಮಾಡಿದ ಗ್ರಾಹಕರಿಗೆ ಚಿತ್ರದ ಮೇಕಿಂಗ್ ಮತ್ತು ನಿರ್ದೇಶಕ ಕರ್ರಿ ಬಾರ್ಕರ್ ಅವರ ಆಡಿಯೋ ಕಾಮೆಂಟರಿ ಒಳಗೊಂಡ ವಿಶೇಷ ಬೋನಸ್ ಫೀಚರ್‌ಗಳೂ ಸಿಗಲಿವೆ.
ಮೇ 15ರಂದು ರಿಲೀಸ್ ಆಗಿದ್ದ ಸಿನಿಮಾ
ಮೇ 15ರಂದು ಫೋಕಸ್ ಫೀಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಬಿಡುಗಡೆಯಾದ ಒಬ್ಸೆಷನ್ ಸಿನಿಮಾ ಇಡೀ ವಿಶ್ವದಲ್ಲೇ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 700 ಸಾವಿರ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 7 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಚಿಕೊಂಡಿದ್ದು ಬರೋಬ್ಬರಿ 300 ಮಿಲಿಯನ್ಗೂ ಹೆಚ್ಚು ಹಣ. ಸಣ್ಣಪುಟ್ಟ ಯೂಟ್ಯೂಬ್ ವಿಡಿಯೋ ಮಾಡುತ್ತಿದ್ದ ಕರ್ರಿ ಬಾಕರ್ ಸದ್ಯ ತಮ್ಮ ಕತೆಯಿಂದಾಗಿ ಇಡೀ ಜಗತ್ತಿಗೆ ಗುರುತಿಸಿಕೊಂಡಿದ್ದಾರೆ.
ಟೊರೊಂಟೊ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಮಿಡ್ನೈಟ್ ಸೆಕ್ಷನ್ ಸಿನಿಮಾ ಪ್ರದರ್ಶನ ಕಾಣುತ್ತಲೇ ಫೋಕಸ್ ಫೀಚರ್ಸ್ ಸಂಸ್ಥೆ ಈ ಸಿನಿಮಾವನ್ನು 15 ಮಿಲಿಯನ್ ಕೊಟ್ಟು ಖರೀದಿ ಮಾಡಿತ್ತು. ಸಿನಿಮಾಗೆ ಯಾವುದೇ ಭರ್ಜರಿ ಪ್ರಚಾರದ ವೇದಿಕೆ ಸಿಕ್ಕಿಲ್ಲ. ಆದರೆ ಜನರ ರಿವ್ಯೂಗಳು ಹೆಚ್ಚಾಗುತ್ತ ನೋಡುಗರ ಸಂಖ್ಯೆಯೂ ಏರಿಕೆಯಾಯ್ತು ಸದ್ಯ ಸಿನಿಮಾ ಮೇಲಿನ ಕ್ರೇಜ್ ಜನರಿಗೆ ನಿಂತಿಲ್ಲ.
ಒಬ್ಸೆಷನ್ ಕತೆ ಏನು?
ಕಥಾ ನಾಯಕ ಬೇರ್ (ಮೈಕೆಲ್ ಜಾನ್‌ಸ್ಟನ್)ಗೆ ನಿಕ್ಕಿ ಎನ್ನುವ ಹುಡಗಿಯ ಮೇಲೆ ಕ್ರಶ್ ಇರುತ್ತದೆ. ಆದರೆ ಆಕೆಗೆ ಈತನನ್ನು ಕಂಡರೆ ಅಷ್ಟಾಗಿ ಇಷ್ಟವಿರೋದಿಲ್ಲ. ಒಮ್ಮೆ ಆತ ತನ್ನ ಕಾರಿನಲ್ಲಿ ಕುಳಿತು ತನ್ನ ಬಳಿ ಇರುವ ಒನ್ ವಿಶ್ ವಿಲೋ ಎನ್ನುವ ವಸ್ತು ಮುರಿದು ಆಕೆ ನನ್ನನ್ನಷ್ಟೇ ಪ್ರೇಮಿಸಬೇಕು ಎಂದು ಕೇಳಿಕೊಳ್ಳುತ್ತಾನೆ. ಅಲ್ಲಿಂದ ನಿಕ್ಕಿ ಹೆಚ್ಚಾಗಿ ಪ್ರೀತಿ ಮಾಡಲು ಶುರು ಮಾಡಿಕೊಳ್ಳುತ್ತಾಳೆ. ಆದರೆ ಆ ಪ್ರೀತಿ ಆತನಿಗೆ ಉಸಿರುಗಟ್ಟಿವಷ್ಟು ಭಯಾನಕವಾಗಿ ಕಾಣಿಸಿಕೊಳ್ಳುತ್ತದೆ. ನಂತರ ಆಕೆಯಲ್ಲಾಗುವ ಬದಲಾವಣೆ, ನಾನಾ ತಿರುವು ಕತೆಯ ಹಿನ್ನೆಲೆಯಾಗಿದೆ, (ಏಜೆನ್ಸೀಸ್)