ಸಿನಿವಾಣಿ

ಇದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ: ಕೆಲ ಬಾಲಿವುಡ್​ ಸೆಲೆಬ್ರಿಟಿ ದಂಪತಿಯ ಮದ್ವೆ ಹಿಂದಿನ ಗುಟ್ಟು ಬಿಚ್ಚಿಟ್ಟ ನೋರಾ!

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಮಡಗಾಂವ್ ಚಿತ್ರದ ಮೂಲಕ ನಟಿ ನೋರಾ ಫತೇಹಿ ಪ್ರೇಕ್ಷಕರನ್ನು ರಂಜಿಸಿದರು. ಸದ್ಯ ಈ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಡಾನ್ಸರ್​​ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನೋರಾ, ಟೈಗರ್ಸ್ ಆಫ್ ದಿ ಸುಂದರಬನ್ಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದರ್ಪಣೆ ಮಾಡಿದರು. ಆ ನಂತರ ಬಿಗ್​ಬಾಸ್ ಶೋನಲ್ಲೂ ಕಾಣಿಸಿಕೊಂಡರು. ನೋರಾ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಬಾಲಿವುಡ್ ಇಂಡಸ್ಟ್ರಿಯ ಬಗ್ಗೆ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಾಲಿವುಡ್‌ನ ಪ್ರಸಿದ್ಧ ಜೋಡಿಗಳನ್ನು ಗುರಿಯಾಗಿಸಿಕೊಂಡು ಮಾಡಿದ ಕಾಮೆಂಟ್‌ಗಳು ಇದೀಗ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಬಾಲಿವುಡ್​ ಇಂಡಸ್ಟ್ರಿಯಲ್ಲಿ ಹಣ ಮತ್ತು ಹೆಸರಿಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನೀವು ಪ್ರೀತಿಸದ ವ್ಯಕ್ತಿಯನ್ನು ಮದುವೆಯಾಗುವುದಕ್ಕಿಂತ ಕೆಟ್ಟದ್ದು ಏನೂ ಇಲ್ಲ. ಇಷ್ಟವಿಲ್ಲದಿದ್ದರೂ ವರ್ಷಾನುಗಟ್ಟಲೆ ಅವರ ಜತೆ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಇಂತಹ ನಿಷ್ಪ್ರಯೋಜಕರು ಅನೇಕರಿದ್ದಾರೆ. ಅವರು ಆ ವಲಯದಲ್ಲೇ ಇರಲು ಬಯಸುತ್ತಾರೆ. ಆದರೆ, ಅವರ ವೃತ್ತಿಜೀವನ ಎತ್ತ ಸಾಗುತ್ತಿದೆ ಎಂಬ ಅರಿವು ಅವರಿಲ್ಲ. ಅದಕ್ಕಾಗಿಯೇ ಅವರಿಗೆ ಕೆಲವು ಬ್ಯಾಕಪ್ ಯೋಜನೆ ಅಗತ್ಯವಿದೆ ಎಂದು ನೋರಾ ಹೇಳಿದರು.

ತನಗೆ ಯಾವ ಬಾಯ್‌ಫ್ರೆಂಡ್‌ಗಳೂ ಇಲ್ಲ ಎಂದ ನೋರಾ, ಅನೇಕರು ತಮ್ಮ ಖ್ಯಾತಿಗಾಗಿ ಮಾತ್ರ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆ ರೀತಿಯ ಜನರ ನನ್ನ ಜೊತೆ ಇರೋದಕ್ಕೆ ನನಗೆ ಇಷ್ಟವಿಲ್ಲ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಕೆಲವರು ಮದುವೆಯಾಗುವುದು ಹಣ ಮತ್ತು ಪ್ರಭಾವಕ್ಕಾಗಿ ಮಾತ್ರ. ಇವರೆಲ್ಲ ತಮ್ಮ ಸಂಬಂಧವನ್ನು ಗಂಡ-ಹೆಂಡತಿ ಎನ್ನದೆ, ಹಣ ಮತ್ತು ಹೆಸರಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ನೀವು ಆ ವ್ಯಕ್ತಿಯನ್ನು ಮದುವೆಯಾಗಲು ಬಯಸಿದರೆ, ಮೂರು ವರ್ಷಗಳ ಕಾಲ ಅವನ ಜತೆ ಸಂಬಂಧದಲ್ಲಿ ಇರಬೇಕು. ಆ ನಂತರ ಅವರ ಜೊತೆ ಒಂದಷ್ಟು ಸಿನಿಮಾ ಮಾಡುತ್ತಾರೆ. ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆದಾಗ ಮದುವೆಯಾಗಿ ಸೆಟಲ್ ಆಗುತ್ತಾರೆ ಎಂದು ನೋರಾ ಹೇಳಿದರು.

ಇದಲ್ಲದೇ ಕೆಲವರು ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿ ವೈಯುಕ್ತಿಕ ಜೀವನವನ್ನೇ ಬಲಿಕೊಟ್ಟು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ನೋರಾ ಹೇಳಿದ್ದಾರೆ. ವೈಯುಕ್ತಿಕ ಜೀವನ, ಮಾನಸಿಕ ಸ್ವಾಸ್ಥ್ಯ ಮತ್ತು ಸಂತೋಷವನ್ನು ಏಕೆ ಬಲಿಕೊಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದರು. ಆದರೆ ನೋರಾ ಫತೇಹಿ ಯಾವುದೇ ದಂಪತಿಯ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಇದೀಗ ನೋರಾ ಅವರು ಮಾತುಗಳು ಬಾಲಿವುಡ್​ನಲ್ಲಿ ಭಾರಿ ಚರ್ಚೆಯಾಗುತ್ತಿದೆ. (ಏಜೆನ್ಸೀಸ್​)