ಐಟಂ ಡಾನ್ಸ್ಗಳಿಗೆ ಜನಪ್ರಿಯರಾದವರು ನೋರಾ ಫತೇಹಿ. ನೋರಾ ಬಂದು ಹಾಡಿನಲ್ಲಿ ಸೊಂಟ ಬಳುಕಿಸಿದರು ಎಂದರೆ, ಚಿತ್ರ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಅದೇ ಕಾರಣಕ್ಕೆ, ಬರೀ ಹಿಂದಿಯಲ್ಲಷ್ಟೇ ಅಲ್ಲ, ಬೇರೆಬೇರೆ ಭಾಷೆಗಳಲ್ಲೂ ನೋರಾ ಬೇಡಿಕೆಯ ಡಾನ್ಸರ್ ಆಗಿದ್ದಾರೆ.
ಈಗ ನೋರಾ, ಜನಪ್ರಿಯ ಗಾಯಕ ಗುರು ರಾಂಧವ ಹಾಡಿರುವ ‘ಡಾನ್ಸ್ ಮೇರಿ ರಾಣಿ’ ಎಂಬ ವಿಡಿಯೋ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಆಗಿದ್ದರೆ, ಸುದ್ದಿಯಾಗುತ್ತಿರಲಿಲ್ಲ. ಇದರಲ್ಲಿ ನೋರಾ, ಮತ್ಸ್ಯಕನ್ಯೆಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಈ ಮತ್ಸ್ಯಕನ್ಯೆ ಕಾಸ್ಟೂಮ್್ನು ಜಾನಥನ್ ಮಾರಿಯೋ ರೂಪಿಸಿದ್ದು, ಸುಮಾರು 15 ಕೆಜಿ ತೂಕದ್ದಾಗಿದೆಯಂತೆ. ಅಮೆರಿಕಾದಲ್ಲಿ ಮೂರು ತಿಂಗಳ ಕಾಲ ಈ ಕಾಸ್ಟೂಮ್ ಸಿದ್ಧಪಡಿಸಲಾಗಿದ್ದು, ಇತ್ತೀಚೆಗೆ ಭಾರತಕ್ಕೆ ತಂದು, ನೋರಾಗೆ ತೊಡಿಸಿ, ಚಿತ್ರೀಕರಣ ಮಾಡಲಾಗಿದೆ.
ಈ ಕಾಸ್ಟೂಮ್ ಮಾಡುವುದು ಎಷ್ಟು ಸವಾಲಿನದ್ದಾಗಿತ್ತೋ, ಅದನ್ನು ತೊಡುವುದು ಸಹ ಅಷ್ಟೇ ಸವಾಲಿನದ್ದಾಗಿತ್ತು ಎಂದು ನೋರಾ ಹೇಳಿಕೊಂಡಿದ್ದಾರೆ. ಈ ಡ್ರೆಸ್ ತೊಡುವುದಕ್ಕೆ ಎರಡು ಗಂಟೆ ಅವಧಿ ಬೇಕಾಗುತ್ತಿತ್ತಂತೆ. ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಕಾಸ್ಟೂಮ್ ನೋಡುವುದಕ್ಕೆ ಬಹಳ ಸುಂದರವಾಗಿದ್ದರೂ, ಕಟ್ಟಿಹಾಕಿದಂತಾಗುತ್ತಿತ್ತು. ತೂಕ ಹೆಚ್ಚಿದ್ದರಿಂದ ಸುಸ್ತಾಗುತ್ತಿತ್ತು. ನೀರಿನ ಒಳಗಡೆ ಚಿತ್ರೀಕರಣ ಮಾಡಿದ್ದು ಇನ್ನೂ ಕಷ್ಟವಾಗಿತ್ತು’ ಎಂದಿದ್ದಾರೆ.