Salman Khan: ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಸಲ್ಮಾನ್ ಖಾನ್ ಅಭಿನಯದ ಮಾತೃಭೂಮಿ ಚಿತ್ರದ ಕುರಿತು ಇದೀಗ ಹೊಸ ಚರ್ಚೆ ಶುರುವಾಗಿದೆ. ಈ ಸಿನಿಮಾ ಚೀನಾ ವಿರೋಧಿ ಕಥಾಹಂದರ ಹೊಂದಿದೆ, ಸರ್ಕಾರದ ಒತ್ತಡದಿಂದ ಚಿತ್ರದ ಸ್ಕ್ರಿಪ್ಟ್ ಬದಲಾಯಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಎಲ್ಲಾ ಆರೋಪಗಳಿಗೆ ನಟ ಸಲ್ಮಾನ್ ಖಾನ್ ಇದೀಗ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಸುದ್ದಿಗಳನ್ನು ಬಕ್ವಾಸ್ (ಅಸಂಬದ್ಧ) ಎಂದು ಕರೆದಿದ್ದಾರೆ.
ಚಿತ್ರದ ಕಥೆಯ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, ಇದು ಎರಡು ದೇಶಗಳ ಸೈನಿಕರ ನಡುವಿನ ಸಂಘರ್ಷದ ಕಥೆಯಾಗಿದೆ ಎಂದು ವಿವರಿಸಿದ್ದಾರೆ. ಇಲ್ಲಿ ಯಾವುದೇ ಒಂದು ದೇಶವನ್ನು ನಕಾರಾತ್ಮಕವಾಗಿ ಬಿಂಬಿಸುವ ಉದ್ದೇಶವಿಲ್ಲ. ಬದಲಿಗೆ ಸೈನಿಕರಿಗೆ ದೇಶವೇ ಮೊದಲ ಆದ್ಯತೆಯಾಗಿರುತ್ತದೆ. ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಸಿಲುಕಿರುವ ಎರಡೂ ದೇಶಗಳ ಸೈನಿಕರು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವ ಕಥೆಯೇ ಚಿತ್ರದ ಪ್ರಮುಖ ಅಂಶ ಎಂದು ಹೇಳಿದ್ದಾರೆ.ಇದೇ ವೇಳೆ ನಿರ್ದೇಶಕರ ಬಳಿ ಈ ಹಿಂದೆ ಚಿತ್ರದ ಹಳೆಯ ಆವೃತ್ತಿಯೊಂದಿತ್ತು ಎಂದು ಸಲ್ಮಾನ್ ಖಾನ್ ತಮಾಷೆಯಾಗಿ ಹೇಳಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾದಾಗಿನಿಂದ ಇದು ಚೀನಾ ವಿರೋಧಿ ಸಿನಿಮಾ ಎಂಬ ಚರ್ಚೆ ಆರಂಭವಾಗಿತ್ತು. ಸರ್ಕಾರದ ಸೂಚನೆಯಂತೆ ಕಥೆಯನ್ನು ಮರುಬರೆಯಲಾಗಿದೆ ಎಂಬ ಆರೋಪಗಳಿಗೂ ಅವರು ಪ್ರತಿಕ್ರಿಯಿಸಿದ್ದಾರೆ. ಇಂತಹ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾತೃಭೂಮಿ ಸಿನಿಮಾ ಯಾವುದೇ ವ್ಯಕ್ತಿಯ ಜೀವನಾಧಾರಿತ ಚಿತ್ರವಲ್ಲ ಎಂದೂ ಸಲ್ಮಾನ್ ಖಾನ್ ತಿಳಿಸಿದ್ದಾರೆ. ಇದು ಕೆಲವು ನೈಜ ಘಟನೆಗಳಿಂದ ಪ್ರೇರಣೆ ಪಡೆದ ಕಥೆಯಾಗಿದೆ. ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷವನ್ನು ಒಳಗೊಂಡಿರುವುದರಿಂದ ಸಿನಿಮಾ ಎರಡೂ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ನಡೆದಿವೆ. ಆದರೆ ಸಿನಿಮಾ ಮಾಡಿದ್ದಕ್ಕೆ ಚೀನಾ ಭಾರತದ ಮೇಲೆ ದಾಳಿ ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಅವರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಆರಂಭದಲ್ಲಿ ಈ ಸಿನಿಮಾವನ್ನು ಬ್ಯಾಟಲ್ ಆಫ್ ಗಲ್ವಾನ್ ಎಂಬ ಹೆಸರಿನಲ್ಲಿ ಘೋಷಿಸಲಾಗಿತ್ತು. ಬಳಿಕ ಈ ವರ್ಷದ ಆರಂಭದಲ್ಲಿ ಚಿತ್ರದ ಹೆಸರನ್ನು ಮಾತೃಭೂಮಿ ಎಂದು ಬದಲಾಯಿಸಲಾಯಿತು. 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಸಂಘರ್ಷದ ಹಿನ್ನೆಲೆಯಿಂದ ಪ್ರೇರಿತವಾದ ಈ ಸಿನಿಮಾದಲ್ಲಿ ಚೀನಾ ಕುರಿತ ಉಲ್ಲೇಖಗಳು ಮತ್ತು ಕಥಾಹಂದರದ ಬಗ್ಗೆ ರಕ್ಷಣಾ ಸಚಿವಾಲಯ ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಚಿತ್ರದ ಬಿಡುಗಡೆ ವಿಳಂಬಕ್ಕೂ ಕಾರಣವಾಗಿತ್ತು ಎಂಬ ವರದಿಗಳಿದ್ದವು.
ಕಳೆದ ಸೆಪ್ಟೆಂಬರ್ನಲ್ಲಿ ಚಿತ್ರದ ಹೊಸ ಆವೃತ್ತಿಗೆ ಅನುಮತಿ ದೊರೆತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ನಿರ್ಮಾಪಕರು ಸಲ್ಲಿಸಿದ ಹೊಸ ಆವೃತ್ತಿಗೆ ತೃಪ್ತಿ ವ್ಯಕ್ತಪಡಿಸಿದ್ದು, ಚಿತ್ರಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡಿದ್ದಾರೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಯಾವುದೇ ದೃಶ್ಯಗಳನ್ನು ಕತ್ತರಿಸದೆ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಲಾಗಿದೆ ಎನ್ನಲಾಗಿದೆ.
ಅಪೂರ್ವ ಲಖಿಯಾ ನಿರ್ದೇಶನದ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ಚಿತ್ತರಂಗದಾ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಹೊರತಾಗಿ ಸಲ್ಮಾನ್ ಖಾನ್ ವಂಶಿ ಪೈಡಿಪಲ್ಲಿ ನಿರ್ದೇಶನದ ತಾತ್ಕಾಲಿಕವಾಗಿ SVC63 ಎಂದು ಹೆಸರಿಡಲಾಗಿರುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ಕೂಡ ಅಭಿನಯಿಸುತ್ತಿದ್ದಾರೆ.ಚೀನಾ ವಿರೋಧಿ ಸಿನಿಮಾ ಎಂಬ ವಿವಾದದ ನಡುವೆ ಸಲ್ಮಾನ್ ಖಾನ್ ನೀಡಿರುವ ಈ ಸ್ಪಷ್ಟನೆ ಇದೀಗ ಮಾತೃಭೂಮಿ ಚಿತ್ರದ ಬಗ್ಗೆ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ, (ಏಜೆನ್ಸೀಸ್).