ಸಿನಿವಾಣಿ

ಸುಶಾಂತ್​​ ಸಿಂಗ್​ರದ್ದು ಹತ್ಯೆನಾ?- ಈ ಪ್ರಶ್ನೆಗೆ ಸಿಬಿಐ ಅಧಿಕಾರಿಗಳು ಉತ್ತರಿಸಿದ್ದು ಹೀಗೆ...

ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐನ ಮೂವರು ಅಧಿಕಾರಿಗಳು ನಡೆಸುತ್ತಿದ್ದಾರೆ. ರಿಯಾ ಚಕ್ರವರ್ತಿ, ಸಿದ್ಧಾರ್ಥ್​ ಪಿಠಾಣಿ ಸೇರಿ ಈಗಾಗಲೇ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಇದುವರೆಗೂ ಒಂದೇ ಒಂದು ಸಾಕ್ಷಿ ಸಿಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಸುಶಾಂತ್​ ಅವರದ್ದು ಹತ್ಯೆ ಎಂದು ಸಾಬೀತು ಮಾಡುವ ಒಂದೇ ಒಂದು ಸಾಕ್ಷಿ ಇದುವರೆಗೆ ಸಿಕ್ಕಿಲ್ಲ. ತನಿಖೆ ಮುಂದುವರಿಯುತ್ತಿದೆ ಎಂದು ಸಿಬಿಐ ಅಧಿಕಾರಿಗಳೇ ತಿಳಿಸಿದ್ದಾಗಿ ಮಾಧ್ಯಮ ಹೇಳಿದೆ.

ಜೂನ್​ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಅದು ಕೊಲೆ ಎಂದೇ ಹೇಳಲಾಗುತ್ತಿದೆ. ಈ ಸಂಬಂಧ ಅನೇಕ ವಿಚಾರಗಳು ಪ್ರತಿದಿನ ಬೆಳಕಿಗೆ ಬರುತ್ತಿದೆ.

ಸುಶಾಂತ್​ಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಲಾಗಿದೆಯೇ ಎಂಬುದರ ಮೇಲೆ ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪರಾಧ ನಡೆದ ಸ್ಥಳದ ಸಂಪೂರ್ಣ ಪರಿಶೀಲನೆಯನ್ನು ಸಿಬಿಐ ಅಧಿಕಾರಿಗಳು ಮಾಡಿದ್ದಾರೆ. ಬಾಂದ್ರಾ ಪೊಲೀಸರು ಸಂಗ್ರಹಿಸಿದ್ದ ಪ್ರಮುಖ ಮಾಹಿತಿಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಅದರ ಆಧಾರದ ಮೇಲೆಯೇ ರಿಯಾ ಚಕ್ರವರ್ತಿ ಸೇರಿ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇಷ್ಟು ದಿನಗಳ ತನಿಖೆಯಲ್ಲಿ ಹೊರಬಿದ್ದ ವಿಷಯಗಳು, ಅಂದರೆ ವಿಧಿವಿಜ್ಞಾನ ವರದಿಗಳು, ವಿಚಾರಣೆಗೆ ಒಳಪಟ್ಟವರ ಹೇಳಿಕೆಗಳು, ಅಪರಾಧ ಸ್ಥಳದಲ್ಲಿ ಸಿಕ್ಕ ಮಾಹಿತಿಗಳು ಯಾವವೂ ಸುಶಾಂತ್​​ನನ್ನು ಯಾರೋ ಕೊಲೆ ಮಾಡಿದ್ದಾರೆ ಎಂಬುದನ್ನು ಹೇಳುತ್ತಿಲ್ಲ. ನರಹತ್ಯೆ ಅಲ್ಲ ಎಂದೇ ಗೋಚರಿಸುತ್ತಿದೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯಾರಾದರೂ ಪ್ರಚೋದನೆ ನೀಡಿದ್ದಾರಾ ಎಂಬುದರ ಬಗ್ಗೆ ಕೇಂದ್ರೀಕರಿಸಿ ವಿಚಾರಣೆ ಮುಂದುವರಿಸಲಾಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್​)