ಸಿನಿವಾಣಿ

ಅಭಿಮಾನಿಗಳ ಪ್ರೀತಿ ಬೆಲೆ ಕಟ್ಟಲಾಗದ್ದು...

ಫೆಬ್ರವರಿ ತಿಂಗಳು ಬಂತೆಂದರೆ ಪ್ರೀತಿಯ ಚರ್ಚೆಯಾಗುತ್ತದೆ. ಅದರಲ್ಲೂ ಫೆಬ್ರವರಿ 14ರಂದು ಪ್ರೀತಿಯ ಬಗ್ಗೆ, ಪ್ರೇಮಿಗಳ ಬಗ್ಗೆ ಚರ್ಚೆ ಇನ್ನಷ್ಟು ಜಾಸ್ತಿಯಾಗುತ್ತದೆ. ಇದಕ್ಕೆ ಪ್ರತಿಯಾಗಿ, ಈ ಪ್ರೀತಿಯನ್ನು ಪ್ರೇಮಿಗಳಿಗೆ ಮತ್ತು ಕೇವಲ ಒಂದೇ ಒಂದು ದಿನಕ್ಕೆ ಯಾಕೆ ಸೀಮಿತಗೊಳಿಸಬೇಕು, ಪ್ರೀತಿ ಎಂದರೆ ಸರ್ವವ್ಯಾಪಿ ಎಂಬೆಲ್ಲ ಮಾತುಗಳು ಕೇಳಿಬರುತ್ತದೆ. ಇದನ್ನು ಚಂದನವನದ ಕೆಲವು ತಾರೆಯರು ಸಹ ಅನುಮೋದಿಸುತ್ತಾರೆ. ಯಾರೆಲ್ಲ ಏನು ಮಾತಾಡಿದ್ದಾರೆ ಎಂಬುದು ಒಮ್ಮೆ ನೋಡೋಣ ಬನ್ನಿ...

ಅಭಿಮಾನಿಗಳ ಪ್ರೀತಿ ಬೆಲೆ ಕಟ್ಟಲಾಗದ್ದು...

ನನಗೆ ಎಲ್ಲರಿಗಿಂತ ಮುಖ್ಯ ಅಮ್ಮ. ಅಮ್ಮನನ್ನು ನಾನು ಬಹಳ ಪ್ರೀತಿಸುತ್ತೇನೆ. ಆ ನಂತರ ಅಣ್ಣ, ನಾಯಿಮರಿಗಳು, ಫ್ಯಾಮಿಲಿ ಹೀಗೆ ಪಟ್ಟಿ ಬೆಳೆಯುತ್ತದೆ. ಯಾರೇ ಆಗಲೀ ತಮ್ಮ ಫ್ಯಾಮಿಲಿಗಾಗಿ ಏನು ಬೇಕಾದರೂ ಮಾಡುತ್ತೀವಿ. ನಾನು ಕೆಲಸವನ್ನು ಪ್ರೀತಿಸುತ್ತೀನಿ ಮತ್ತು ನಾನು ತುಂಬಾ ಖುಷಿಯಾಗಿರುವುದು ಕೆಲಸ ಮಾಡುವ ಸಂದರ್ಭದಲ್ಲಿ. ಅದೇ ನನ್ನ ಹ್ಯಾಪಿ ಪ್ಲೇಸ್. ಇನ್ನು, ಹೊಸಹೊಸ ಜಾಗಗಳೆಂದರೆ ಬಹಳ ಪ್ರೀತಿ. ಇಡೀ ಪ್ರಪಂಚವನ್ನೇ ಸುತ್ತಾಡಬೇಕು ಅಂತ ಆಸೆ ನನಗೆ. ಅದೇ ಕಾರಣಕ್ಕೆ ಹೊಸಹೊಸ ದೇಶಗಳಿಗೆ ನಾನು ಹೋಗುತ್ತಲೇ ಇರುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ, ನಾನು ಇವತ್ತು ನಾಲ್ಕು ಜನರಿಗೆ ಗೊತ್ತಿರುವುದು ಅಭಿಮಾನಿಗಳಿಂದ. ನನ್ನ ಕೆಲಸಗಳನ್ನು ಮೆಚ್ಚಿಕೊಂಡು, ನನ್ನ ತೀರ್ವನಗಳನ್ನು ಪ್ರೋತ್ಸಾಹಿಸಿ, ಇಷ್ಟು ವರ್ಷಗಳಿಂದ ಪ್ರೀತಿ ಕೊಡುತ್ತಿದ್ದಾರಲ್ಲ ... ಆ ಪ್ರೀತಿ ಬೆಲೆ ಕಟ್ಟಲಾಗದ್ದು. ಇನ್ನು,ನಾನು ಕೆಲಸ ಮಾಡುವ ಚಿತ್ರಗಳ ತಂಡಗಳು ತೋರಿಸುವ ಪ್ರೀತಿ ... ನಾನು ಈ ಪ್ರೀತಿಗೆ ಹೆಚ್ಚು ಮಹತ್ವ ಕೊಡುತ್ತೇನೆ.

| ಹರಿಪ್ರಿಯಾ