ಸಿನಿವಾಣಿ

'ಕೆಜಿಎಫ್​-2 & ಬೀಸ್ಟ್' ಮಧ್ಯೆ ಪೈಪೋಟಿ ಇಲ್ಲ​; ಸಿನಿಮಾದ ನಟರು ಮಾತ್ರವಲ್ಲ, ನಿರ್ದೇಶಕರು ಒಳ್ಳೆಯ ಮಿತ್ರರು

ಭಾರತದಲ್ಲಿ ಸಿನಿಪ್ರಿಯರು ಸದ್ಯ ಏಪ್ರಿಲ್ ತಿಂಗಳಿಗೋಸ್ಕರ ಚಾತಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದಾರೆ. ಕಾರಣ, ಏಪ್ರಿಲ್​ನಲ್ಲಿ ಸಿನಿಪ್ರಿಯರಿಗೆ ಮಸ್ತ್ ಮನರಂಜನೆ ಸಿಗಲಿದೆ. ಹೌದು, ಹಲವು ಬಿಗ್ ಬಜೆಟ್ಪ್ಯಾ,ನ್ ಇಂಡಿಯಾ ಚಿತ್ರಗಳು ಒಟ್ಟೊಟ್ಟಿಗೆ ತೆರೆಗಪ್ಪಳಿಸಲಿವೆ. ಹಾಗೆ ರಿಲೀಸ್ ಆಗುವ ಸಿನಿಮಾಗಳ ಪೈಕಿ, ನಟ ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಯಿಸಿರುವ ‘ಕೆಜಿಎಫ್: ಚಾಪ್ಟರ್ 2’ ಮತ್ತು ತಮಿಳು ನಟ ದಳಪತಿ ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರಗಳು ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿವೆ. ಇನ್ನು, ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾಗಳು ಕೇವಲ ಒಂದೇ ದಿನದ ಅಂತರದಲ್ಲಿ ರಿಲೀಸ್ ಆಗಲಿವೆ. ಹಾಗಾಗಿ, ಈ ಎರಡೂ ಚಿತ್ರಗಳ ನಡುವೆ ಸಿಕ್ಕಾಪಟ್ಟೆ ಕಾಂಪಿಟಿಷನ್ ಇರಲಿದೆ ಎಂದು ಊಹಿಸಲಾಗಿತ್ತು.
ಸ್ಟಾರ್ ಕಲಾವಿದರ ಸಿನಿಮಾಗಳು ಏಕಕಾಲಕ್ಕೆ ತೆರೆ ಕಾಣುತ್ತಿರುವುದರಿಂದ ಈಗಾಗಲೇ ಚಿತ್ರಮಂದಿರಗಳ ಹಂಚಿಕೆ ವಿಚಾರದಲ್ಲಿ, ಯಾವ ಸಿನಿಮಾ ಹಿಟ್ ಆಗಲಿದೆ, ಯಾರ ಸಿನಿಮಾ ಹೆಚ್ಚು ಹವಾ ಸೃಷ್ಟಿಸಲಿದೆ, ಯಾವ ಚಿತ್ರ ಎಷ್ಟು ಕಲೆಕ್ಷನ್ ಮಾಡುತ್ತದೆ ಎನ್ನುವ ಅಂಶಗಳನ್ನು ಆಧರಿಸಿ ಸಿಕ್ಕಾಪಟ್ಟೆ ಪೈಪೋಟಿ ಏರ್ಪಡಲಿದೆ ಎನ್ನಲಾಗಿತ್ತು. ನಟ ದಳಪತಿ ವಿಜಯ್ ಅವರ ‘ಬೀಸ್ಟ್’ ಸಿನಿಮಾಗೆ ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶನ ಮಾಡಿದ್ದು, ಪ್ರಶಾಂತ್​ ನೀಲ್ ಅವರು ನಟ ಯಶ್ ಅವರ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏ.13 ರಂದು ‘ಬೀಸ್ಟ್’ ಹಾಗೂ ಮರುದಿನ ಏ.14 ರಂದು ‘ಕೆಜಿಎಫ್ 2’ ಚಿತ್ರಗಳ ಅಬ್ಬರ ಆರಂಭವಾಗಲಿದೆ. ಆದರೆ, ಅಭಿಮಾನಿಗಳು ಅಂದುಕೊಂಡಂತೆ ಈ ಸಿನಿಮಾಗಳ ನಡುವೆ ಕಾಂಪಿಟಿಷನ್ ಇರುವುದಿಲ್ಲ ಎಂಬಂತೆ ಕಾಣುತ್ತಿದೆ.
ಹೌದು, ‘ಬೀಸ್ಟ್’ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಹಾಗೂ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಪರಸ್ಪರ ತಮ್ಮ ಸಿನಿಮಾಗಳಿಗೆ ಒಳ್ಳೆಯದಾಗಲಿ ಎಂದು ವಿಶ್​ ಮಾಡಿಕೊಂಡಿದ್ದಾರೆ. ಅಂದಹಾಗೆ, ಮಾ. 27 ರಂದು ‘ಕೆಜಿಎಫ್ 2’ ಟ್ರೈಲರ್ ರಿಲೀಸ್ ಆದಾಗ, ''ನಾವು ತುಂಬ ಮುಂಚೆಯೇ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ವಿ. ಯಾವ ಸಿನಿಮಾ ರಿಲೀಸ್ ಆಗುತ್ತದೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಈಗ ವಿಜಯ್ ಅವರ 'ಬೀಸ್ಟ್' ಚಿತ್ರ ರಿಲೀಸ್ ಆಗುತ್ತಿದೆ. 'ಬೀಸ್ಟ್' ವರ್ಸಸ್ ಕೆಜಿಎಫ್ ಅಂತೇನಿಲ್ಲ. 'ಬೀಸ್ಟ್' ಮತ್ತು 'ಕೆಜಿಎಫ್ 2' ಎಂದು ಹೇಳಬೇಕು. ಎರಡೂ ಕೂಡಾ ಇಂಡಿಯನ್ ಸಿನಿಮಾ. ಇದು ಎಲೆಕ್ಷನ್ ಅಲ್ಲ. ಸಿನಿಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನಿಮಾವನ್ನೂ ನೋಡೋಣ. ವಿಜಯ್ ಸರ್ ನನಗಿಂತ ಸೀನಿಯರ್...
ನಾವು ಅವರಿಗೆ ಗೌರವ ಕೊಡಬೇಕು. ವಿಜಯ್ ಅವರ ಅಭಿಮಾನಿಗಳಿಗೂ ‘ಕೆಜಿಎಫ್ 2’ ಸಿನಿಮಾ ಇಷ್ಟ ಆಗಲಿದೆ'' ಎಂದು ನಟ ಯಶ್ ಹೇಳಿದ್ದರು. ಯಶ್ ಮಾತು ಕೇಳಿದ ತಮಿಳುನಾಡಿನ ಪತ್ರಕರ್ತರೂ ಟ್ರೈಲರ್ ಲಾಂಚ್ ದಿನ ತುಂಬಾನೇ ಖುಷಿ ಪಟ್ಟರು. ಇದೀಗ, 'ಕೆಜಿಎಫ್: ಚಾಪ್ಟರ್ 2' ಚಿತ್ರದ ಟ್ರೈಲರ್ ಕಂಡ 'ಬೀಸ್ಟ್' ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ‘ಕೆಜಿಎಫ್ 2’ ಟ್ರೈಲರ್ ಬಗ್ಗೆ ತಮ್ಮ ಅನಿಸಿಕೆ ಏನು ಎಂಬುದನ್ನು ಟ್ವೀಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ, ನಿರ್ದೇಶಕ ಪ್ರಶಾಂತ್ ನೀಲ್ ಅವರು ಪ್ರತಿಕ್ರಿಯಿಸಿರುವುದು ವಿಶೇಷ ಎಂದೇ ಹೇಳಬೇಕು. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು, ''ಟ್ರೈಲರ್ ತುಂಬ ಚೆನ್ನಾಗಿದೆ. ಸಿನಿಮಾ ನೋಡಲು ನಾನು ನಿರೀಕ್ಷೆಯಲ್ಲಿದ್ದೇನೆ''ಎಂದು ಟ್ವೀಟ್ ಮಾಡಿದ್ದರು.
ಇನ್ನು, ನೆಲ್ಸನ್ ದಿಲೀಪ್ ಕುಮಾರ್ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಶಾಂತ್​ ನೀಲ್​ ಅವರು, ‘ಧನ್ಯವಾದಗಳು ನೆಲ್ಸನ್ ದಿಲೀಪ್ ಕುಮಾರ್. ಎಂದಿನಂತೆ ವಿಜಯ್ ಸರ್ ಅವರನ್ನು ದೊಡ್ಡ ಪರೆದ ಮೇಲೆ ನೋಡಲು ನಾನು ಕಾಯುತ್ತಿದ್ದೇನೆ. 'ಬೀಸ್ಟ್' ಚಿತ್ರಕ್ಕೆ ಆಲ್ ದಿ ಬೆಸ್ಟ್’ ಎಂದು ತಿಳಿಸಿದ್ದಾರೆ. ಹಾಗಾಗಿ, ಸದ್ಯ ನಿರ್ದೇಶಕರಿಬ್ಬರ ನಡುವೆ ಟ್ವೀಟ್​ಗಳ ಮೂಲಕ ನಡೆದ ಈ ಮಾತುಕಥೆಯನ್ನು ಕಂಡು ಅಭಿಮಾನಿಗಳು ದಿಲ್ ಖುಷಿ ಆಗಿದ್ದಾರೆ. ಇನ್ನು, ಇದರಿಂದ 'ಬೀಸ್ಟ್' ಮತ್ತು 'ಕೆಜಿಎಫ್: ಚಾಪ್ಟರ್ 2' ಸಿನಿಮಾಗಳ ನಡುವೆ ಯಾವುದೇ ಕ್ಲ್ಯಾಶ್ ಆಗುವುದಿಲ್ಲ ಎಂದು ಭಾವಿಸಬಹುದು. ಒಂದು ವೇಳೆ ಸ್ಟಾರ್ ನಟರ ಅಭಿಮಾನಿಗಳ ನಡುವೆ ಯಾವುದೇ ಕ್ಲ್ಯಾಶ್ ನಡೆದರೂ, ಈ ಸಿನಿಮಾ ತಂಡಗಳು ಮತ್ತು ನಟರಿಬ್ಬರ ನಡುವೆ ಮಾತ್ರ ಯಾವುದೇ ಕ್ಲ್ಯಾಶ್ ಆಗುವುದಿಲ್ಲ ಎಂದು ಅರ್ಥವಾಗುತ್ತಿದೆ.