ಸಿನಿವಾಣಿ

ನಟಿ ಪೂಜಾ ಹೆಗ್ಡೆ ಕೈ ಖಾಲಿ!

ಕೆಲವೇ ತಿಂಗಳುಗಳ ಹಿಂದಿನ ಮಾತು. ಬರೀ ಟಾಲಿವುಡ್ ಅಷ್ಟೇ ಅಲ್ಲ, ಕಾಲಿವುಡ್, ಬಾಲಿವುಡ್ ಎಲ್ಲೆಲ್ಲಿಯೂ ಪೂಜಾ ಹೆಗ್ಡೆಯದ್ದೇ ಮಾತು. ಹೈದರಾಬಾದ್​ನಿಂದ ಮುಂಬೈಗೆ, ಮುಂಬೈನಿಂದ ಚೆನ್ನೈಗೆ, ಚೆನ್ನೈನಿಂದ ಹೈದರಾಬಾದ್​ಗೆ ಎಂದು ಪೂಜಾ ಓಡಾಡಿಕೊಂಡಿದ್ದರು. ಈಗ ನೋಡಿದರೆ, ಪೂಜಾ ಕೈ ಖಾಲಿಯಾಗಿದೆ. ಅವರ ಖಾತೆಯಲ್ಲಿ ಒಂದೇ ಒಂದು ಹೊಸ ಚಿತ್ರವಿಲ್ಲ.

ವಿಷಯವೇನೆಂದರೆ, ಪೂಜಾ ಕಳೆದ ವರ್ಷ ಸಖತ್ ಬಿಜಿಯಾಗಿದ್ದರು. ತೆಲುಗಿನಲ್ಲಿ ‘ಆಚಾರ್ಯ’ ಮತ್ತು ‘ರಾಧೇ ಶ್ಯಾಮ್, ತಮಿಳಿನಲ್ಲಿ ‘ಬೀಸ್ಟ್’, ಹಿಂದಿಯಲ್ಲಿ ‘ಸರ್ಕಸ್’ ... ಹೀಗೆ ಒಟ್ಟೊಟ್ಟಿಗೆ ನಾಲ್ಕು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದರು. ಅದೇ ಕಾರಣಕ್ಕೆ ಒಂದೂರಿನಿಂದ ಇನ್ನೊಂದು ಊರಿಗೆ ಹೋಗುವುದು ಅವರಿಗೆ ಅನಿವಾರ್ಯವಾಗಿತ್ತು. ಈಗ ಆ ನಾಲ್ಕು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗಿರಬೇಕಿತ್ತು. ಆದರೆ, ಕರೊನಾದಿಂದ ಮುಂದೂಡಲ್ಪಟ್ಟಿವೆ.

ಹೀಗೆ ನಾಲ್ಕು ಚಿತ್ರಗಳನ್ನು ಮುಗಿಸಿ ಅದರ ಬಿಡುಗಡೆಗೆ ಕಾದಿರುವ ಪೂಜಾ, ಇನ್ನಷ್ಟೇ ಹೊಸ ಚಿತ್ರಗಳನ್ನು ಒಪ್ಪಬೇಕಿದೆ. ಈಗಾಗಲೇ ಅವರು ಮಹೇಶ್ ಬಾಬು ಅಭಿನಯದ ಹೊಸ ಚಿತ್ರವನ್ನು ಒಪ್ಪಿದ್ದಾಗಿದೆ. ಇಷ್ಟರಲ್ಲಿ ಆ ಚಿತ್ರ ಸಹ ಶುರುವಾಗಿರಬೇಕಿತ್ತು. ಆದರೆ, ಅದು ಒಂದು ತಿಂಗಳು ಮುಂದಕ್ಕೆ ಹೋಗಿದೆ. ಹಾಗಾಗಿ, ಸದ್ಯ ಖಾಲಿ ಇರುವ ಪೂಜಾ, ಮುಂಬೈನ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರಂತೆ.