ಸಿನಿವಾಣಿ

ವರ್ಷದ ಆರಂಭವೇ ನೀರಸ; ಮೊದಲ ವಾರ ಚಿತ್ರ ಬಿಡುಗಡೆ ಇಲ್ಲ..

ಬೆಂಗಳೂರು: ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆಯೇ, ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಸಹಜ. ಈ ವರ್ಷ, ಆ ಕುತೂಹಲಕ್ಕೆ ಕೋವಿಡ್ ತಣ್ಣೀರು ಎರಚಿದೆ. ವರ್ಷದ ಮೊದಲ ವಾರ ಯಾವುದೇ ಹೊಸ ಕನ್ನಡ ಚಿತ್ರ ಬಿಡುಗಡೆ ಆಗುತ್ತಿಲ್ಲ. ಮೊದಲ ವಾರ ಬಿಡಿ, ಇಡೀ ತಿಂಗಳು ಯಾವ ಚಿತ್ರ ಬಿಡುಗಡೆಯಾಗದಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ.

‘ಡಿಎನ್​ಎ’ ಎಂಬ ಚಿತ್ರದ ಮೂಲಕ ಈ ವರ್ಷ ಪ್ರಾರಂಭವಾಗಬೇಕಿತ್ತು. ಆದರೆ, ಬಿಡುಗಡೆಗೆ ಎರಡು ದಿನ ಇದೆ ಎನ್ನಬೇಕಾದರೆ, ಚಿತ್ರತಂಡದವರು ಮನಸ್ಸು ಬದಲಾಯಿಸಿದ್ದಾರೆ. ಶೇ. 50ರಷ್ಟು ಹಾಜರಾತಿ, ಸಾಲದ್ದಕ್ಕೆ ವೀಕೆಂಡ್ ಕರ್ಫ್ಯೂ ಬೇರೆ, ಎಲ್ಲಕ್ಕಿಂತ ಹೆಚ್ಚಾಗಿ ಜನರಲ್ಲಿ ಕರೊನಾ ಭಯ ... ಹೀಗಿರುವಾಗ ಚಿತ್ರಮಂದಿರದತ್ತ ಜನ ಬರುವುದಿಲ್ಲ ಎಂಬ ಕಾರಣಕ್ಕೆ ಚಿತ್ರವನ್ನು ಮುಂದೂಡಲಾಗಿದೆ. ಮಂಗಳವಾರವಷ್ಟೇ ಆಡಿಯೋ ಬಿಡುಗಡೆ ಮಾಡಿಕೊಂಡು, ಈ ಶುಕ್ರವಾರ ಬರಲಿದ್ದೇವೆ ಎಂದಿದ್ದ ತಂಡ ಇದೀಗ ರಿಲೀಸ್ ನಿರ್ಧಾರದಿಂದ ಹೊರಬಂದಿದೆ. ‘ಡಿಎನ್​ಎ’ ಬಿಟ್ಟರೆ, ಬೇರೆ ಯಾವ ಚಿತ್ರದ ಬಿಡುಗಡೆಯ ಘೋಷಣೆ ಆಗಿರಲಿಲ್ಲ. ಅದರಲ್ಲೂ ಸಂಕ್ರಾಂತಿ ಸಂದರ್ಭದಲ್ಲಿ ಪರಭಾಷೆಗಳ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬ ಸುದ್ದಿ ಇದ್ದಿದ್ದರಿಂದ, ಜ.14ಕ್ಕೆ ಕನ್ನಡದಿಂದ ಯಾವುದೇ ಚಿತ್ರ ಇರಲಿಲ್ಲ. ಇನ್ನು, ಜನವರಿ 21ಕ್ಕೆ ಬಿಡುಗಡೆಯಾಗಬೇಕಿದ್ದ ‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಹ ಮುಂದೂಡಲ್ಪಟ್ಟಿದೆ. ಈ ಕುರಿತು ಮಾತನಾಡಿರುವ ಪ್ರೇಮ್ ‘ಚಿತ್ರವನ್ನು ಮುಂದೂಡಿದ್ದೇವೆ. ಸಮಸ್ಯೆಗಳು ಕಡಿಮೆಯಾಗುತ್ತಿದ್ದಂತೆಯೇ, ಹೊಸ ದಿನಾಂಕ ಪ್ರಕಟಿಸುತ್ತೇವೆ’ ಎಂದು ಹೇಳಿದ್ದಾರೆ. ಅಲ್ಲಿಗೆ ಜನವರಿ ತಿಂಗಳ ಮೊದಲ ಮೂರು ವಾರಗಳ ಕಾಲ ಯಾವುದೇ ಚಿತ್ರ ಬಿಡುಗಡೆಯಾಗುವುದು ಅನುಮಾನ.

ಜನವರಿ ಖಾಲಿ ಖಾಲಿ?: ಜ. 28ಕ್ಕೆ ಯೋಗಿ ಅಭಿನಯದ ‘ಒಂಬತ್ತನೇ ದಿಕ್ಕು’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ರಾತ್ರಿ ಕರ್ಫ್ಯೂ ಹಿಂದಕ್ಕೆ ಪಡೆದರೆ, ಸಂಕ್ರಾಂತಿಗೆ ಬರುವುದಾಗಿ ನಿರ್ದೇಶಕ ದಯಾಳ್ ಹೇಳಿದ್ದಾರೆ. ಆದರೆ, ಸರ್ಕಾರ ಇದನ್ನೇ ಮುಂದುವರಿಸಿದರೆ, ಆಗ ಚಿತ್ರ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, ಜನವರಿ ತಿಂಗಳಲ್ಲಿ ಯಾವುದೇ ಬಿಡುಗಡೆ ಇರುವುದಿಲ್ಲ. ಇದು ಸದ್ಯದ ಪರಿಸ್ಥಿತಿ. ಹೇಗೂ ದೊಡ್ಡ ಚಿತ್ರಗಳ ಭಯವಿರುವುದಿಲ್ಲ, ಶೇ. 100ರಷ್ಟು ಹಾಜರಾತಿ ಬೇಕು ಅಂತಿಲ್ಲ ಎನ್ನುವ ಹೊಸಬರು ಯಾರಾದರೂ ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾದರೆ, ಆಗ ಜನವರಿಯಲ್ಲಿ ಹೊಸ ಚಿತ್ರಗಳು ಬಿಡುಗಡೆಯಾಗಬಹುದು. ಇಲ್ಲವಾದರೆ, ಮೊದಲ ಚಿತ್ರ ಯಾವಾಗ ಬಿಡುಗಡೆಯೋ ಗೊತ್ತಿಲ್ಲ.