ಸಿನಿವಾಣಿ

ಮದುವೆ ಆಗು ಅಂತ ದುಲ್ಕರ್ ಒತ್ತಾಯ ಮಾಡ್ತಿದ್ದಾರೆ: ನಿತ್ಯಾ

ಮಮ್ಮೂಟಿ ಅವರ ಮಗ ದುಲ್ಕರ್ ಸಲ್ಮಾನ್ ಮತ್ತು ನಿತ್ಯಾ ಮೆನನ್ ಅವರ ಜೋಡಿ ಬಹಳ ಜನಪ್ರಿಯವಾಗಿರುವುದು ಗೊತ್ತೇ ಇದೆ. ಅದೇ ಕಾರಣಕ್ಕೆ ಅವರಿಬ್ಬರೂ ಚೆನ್ನಾಗಿ ಕಾಣಿಸಿಕೊಳ್ಳುವುದರಿಂದಲೇ, ದುಲ್ಕರ್ ಮತ್ತು ನಿತ್ಯಾ ಇದುವರೆಗೂ `ಓಕೆ ಕಣ್ಮಣಿ', `ಬೆಂಗಳೂರು ಡೇಸ್', `ಹಂಡ್ರೆಡ್ ಡೇಸ್ ಆಫ್ ಲವ್' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬರೀ ತೆರೆಯ ಮೇಲಷ್ಟೇ ಅಲ್ಲ, ರಿಯಲ್ ಲೈಫ್‍ನಲ್ಲೂ ನಿತ್ಯ ಮತ್ತು ದುಲ್ಕರ್ ಬಹಳ ಒಳ್ಳೆಯ ಸ್ನೇಹಿತರಾಗಿದ್ದು, ಸಾಕಷ್ಟು ವಿಷಯಗಳನ್ನು ಚರ್ಚೆ ಮಾಡುತ್ತಾರಂತೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, `ದುಲ್ಕರ್ ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್. ಹೆಂಡತಿ-ಮಗಳ ಜತೆಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಸಾಂಸಾರಿಕ ಜೀವನವನ್ನು ಪ್ರತಿಯೊಬ್ಬರೂ ಅನುಭವಿಸಬೇಕು ಎನ್ನುವ ಅವರು, ನನಗೂ ಬೇಗ ಮದುವೆಯಾಗು ಎಂದು ಒತ್ತಾಯ ಮಾಡುತ್ತಿರುತ್ತಾರೆ' ಎಂದು ಹೇಳಿಕೊಂಡಿದ್ದಾರೆ. ಆದರೆ, ನಿತ್ಯಾ ಮಾತ್ರ ಇದುವರೆಗೂ ಮದುವೆಯಾಗುವ ಮನಸ್ಸು ಮಾಡಿಲ್ಲ.

ಇನ್ನು ತಮ್ಮ್ ಹಾಗೂ ದುಲ್ಕರ್ ಇಬ್ಬರ ಆನ್‍ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಮಾತನಾಡುವ ಅವರು, `ಜತೆಗೆ ನಟಿಸಿದ ಮೇಲೆ ನಾವಿಬ್ಬರೂ ಸ್ನೇಹಿತರಾದೆವು. ಆದರೆ, ಔಟ್‍ಪುಟ್ ನೋಡಿದಾಗ, ನಮ್ಮಿಬ್ಬರ ಜೋಡಿ ತೆರೆಯ ಮೇಲೆ ಇಷ್ಟೊಂದು ಚೆನ್ನಾಗಿ ಕಾಣುತ್ತದಾ ಎಂದು ನಮಗೇ ಆಶ್ಚರ್ಯವಾಯಿತು' ಎಂದು ಹೇಳಿಕೊಂಡಿದ್ದಾರೆ.

ಮಿಸ್ಕಿನ್ ನಿರ್ದೇಶನದ `ಸೈಕೋ' ಎಂಬ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಿತ್ಯಾ, ಇದೀಗ `ಬ್ರೀದ್ - 2' ಎಂಬ ವೆಬ್ ಸೀರೀಸ್‍ನ ಮೂಲಕ ವಾಪಸ್ಸಾಗಿದ್ದಾರೆ. ಈ ವೆಬ್ ಸೀರೀಸ್, ಅಮೇಜಾನ್ ಪ್ರೈಮ್‍ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಇದರಲ್ಲಿ ಅಭಿಷೇಕ್ ಬಚ್ಚನ್, ಅಮಿತ್ ಸಾದ್ ಮುಂತಾದವರು ಸಹ ನಟಿಸಿದ್ದಾರೆ.