ಯಂತ್ರದಂತೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ..ಗ್ಯಾಪ್ ಬೇಕು, ಕಲಿಕೆ ಮುಖ್ಯ ಎಂದ ನಟಿ ನಿತ್ಯಾ ಮೆನನ್.
ಟಿವಿ, ರಿಯಾಲಿಟಿ ಶೋಗಳನ್ನು ನಾನು ನೋಡೋದೆ ಇಲ್ಲ ಅವು ಕೇವಲ ಗಾಸಿಪ್ ಮನರಂಜನೆಯ ವಲಯದಲ್ಲಿರುತ್ತವೆ.
ತಮ್ಮ ಕಾಲೇಜು ದಿನದಲ್ಲಿ ಕರ್ಲಿ ಹೇರ್ ಬಗ್ಗೆ ಟೀಕೆ ವ್ಯಕ್ತವಾಗಿತ್ತು ಎಂದ ನಟಿ ನಿತ್ಯಾ ಮೆನನ್.
'ಯಂತ್ರದಂತೆ ಸಿನಿಮಾದಲ್ಲಿ ನಟಿಸುತ್ತಾ ಹೋಗುವುದು ನನ್ನಿಂದ ಸಾಧ್ಯವಿಲ್ಲ. ನಟನೆಗೆ ಮಾನಸಿಕವಾಗಿ ತಯಾರಾಗುವುದು ಅಗತ್ಯ. ನಾನು ಬ್ರೇಕ್ ತೆಗೆದುಕೊಂಡಾಗ ಮನೆಯಲ್ಲಿಯೇ ಇರುತ್ತೇನೆ. ಆಗ ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತೇನೆ. ನನ್ನ ಸುತ್ತಮುತ್ತಲಿನ ಜನರು, ಪ್ರಕೃತಿಯನ್ನು ನೋಡುತ್ತೇನೆ, ಕಲಿಯುತ್ತೇನೆ' ಹೀಗೆಂದು ಮಾತನಾಡಿದ್ದು ಬಹುಭಾಷಾ ನಟಿ ನಿತ್ಯಾ ಮೆನನ್.
ನಿತ್ಯಾ ಮೆನನ್ ಸಿನಿಮಾ ಜರ್ನಿ ನೋಡಿದರೆ ಅವರು ಯಾವುದೇ ಪಾತ್ರಗಳನ್ನು ಒಂದೇ ರೀತಿ ಆಯ್ಕೆ ಮಾಡಿಕೊಳ್ಳಲ್ಲ. ಬಹುತೇಕ ಫೀಲ್ ಗುಡ್ ಸಿನಿಮಾಗಳನ್ನೇ ಆರಿಸಿಕೊಳ್ಳುವ ಅವರು, ಒಮ್ಮೆ ಗ್ರಾಮೀಣ ಭಾಗದ ಪೆದ್ದು ಪೆದ್ದು ಹೆಣ್ಮಗಳಾಗಿ, ಮತ್ತೊಮ್ಮೆ ಗೃಹಿಣಿಯಾಗಿ, ಮಗದೊಮ್ಮೆ ಸ್ಟ್ರಿಕ್ಟ್ ಹುಡುಗಿಯಾಗಿ ಗಮನ ಸೆಳೆಯುತ್ತಾರೆ.
ವಿಜಯ್ ಸೇತುಪತಿ ನಟನೆಯ ತಲೈವನ್ ತಲೈವಿ, ಧನುಷ್ ನಟನೆಯ ಇಡ್ಲಿ ಕಡೈ ಸಿನಿಮಾ ರಿಲೀಸ್ ನಂತರ ನಿತ್ಯಾ ಮೆನನ್ ಕಾಣೆಯಾಗಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದ್ದವು. ಆ ಬೆನ್ನಲ್ಲೇ ಅವರು ಗೋಪಿನಾಥ್ ಎಂಬುವವರ ಪಾಡ್ಕಾಸ್ಟ್ನಲ್ಲಿ ಭಾಗಿಯಾಗಿ..ಕಾಲೇಜು ದಿನಗಳಲ್ಲಿ ತಮ್ಮ ಗುಂಗುರು ಕೂದಲಿನಿಂದ ಅನುಭವಿಸಿದ ಸಮಸ್ಯೆ, ಟಿವಿ, ರಿಯಾಲಿಟಿ ಶೋ ಹಾಗೂ ತಮ್ಮ ಸಿನಿಮಾ ಆಯ್ಕೆ ಬಗ್ಗೆ ಮಾತನಾಡಿದ್ದಾರೆ.
ಡಿಸೆಂಬರ್ 11ರಂದು ನಿತ್ಯಾ ಮೆನನ್ ಅವರು ನಟಿಸಿರುವ ಮಿಸ್ಟರ್ ಆಂಡ್ ಮಿಸಸ್ ಗ್ರೇ ಸಿನಿಮಾ ರಿಲೀಸ್ ಆಗುತ್ತಿದೆ. ಹಿಂದಿ ಸೈಕಲಾಜಿಕಲ್ ಡ್ರಾಮಾ-ಥ್ರಿಲ್ಲರ್ ಸಿನಿಮಾವಾಗಿದ್ದು, ವಿವೇಕ್ ಒಬೆರಾಯ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಪ್ರಚಾರದ ಭಾಗವಾಗಿ ಅವರು ಸದ್ಯ ಪಾಡ್ಕಾಸ್ಟ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಡ್ಲಿ ಕಡೈ, ತಲೈವನ್, ತಲೈವಿ ನಂತರ ಕಾಣಿಸಿಕೊಂಡಿಲ್ಲ. ಯಾವುದೇ ಪ್ರಮುಖ ನಟಿಯರು ಇಷ್ಟು ಗ್ಯಾಪ್ ತೆಗೆದುಕೊಳ್ಳುವುದಿಲ್ಲ. ಸದ್ಯ ಈ ಬಗ್ಗೆ ಎದ್ದಿರುವ ಚರ್ಚೆ ಬಗ್ಗೆ ನಟಿ ಮಾತನಾಡಿದ್ದು, 'ನನಗೆ ಯತ್ರದಂತೆ ಕೆಲಸ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ. ತಮ್ಮನ್ನು ತಾವು ಹೂವಿಗೆ ಹೋಲಿಸಿಕೊಂಡ ಅವರು, 'ಒಂದು ಹೂ ನೋಡಿದ್ದೀರಾ..ಅದು ಅರಳಲು ಪ್ರಕೃತಿಯಲ್ಲಿ ತನಗೆ ಬೇಕಾದ ಅಂಶಗಳನ್ನು ಹೀರಿಕೊಳ್ಳುತ್ತದೆ. ಪ್ಲಾಸ್ಟಿಕ್ ಹೂವಿನಂತೆ ಇಟ್ಟಂತೆ ಇರಲು ಸಾಧ್ಯವಿಲ್ಲ. ನಟನೆಗೆ ಬೇಕಾದ ನೈಜತೆ ಒಳಗಿನಿಂದ ಹುಟ್ಟಬೇಕು. ಪಾತ್ರವನ್ನು ಸಹಜವಾಗಿ ನಮ್ಮೊಳಗೆ ಆವರಿಸಿಕೊಳ್ಳುವಂತೆ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ನಮ್ಮ ಸುತ್ತಲಿನ ಪರಿಸರ, ಜನರಿಂದ ಹೊಸ ಪಾತ್ರದಲ್ಲಿ ನಟಿಸಲು ಸ್ಪುರ್ತಿ ಸಿಕ್ಕುತ್ತದೆ. ಸಿನಿಮಾ ನಡುವಿನ ಗ್ಯಾಪ್ ನಟನೆಗೆ ಸ್ಪೂರ್ತಿ ನೀಡುತ್ತದೆ.ನನಗೆ ಕೃತಕವಾಗಿ ನಟಿಸಲು ಸಾಧ್ಯವಿಲ್ಲ. ಲಾಂಗ್ ಗ್ಯಾಪ್ ತೆಗೆದುಕೊಂಡಿಲ್ಲ ಎಂದರೆ ನನ್ನ ನಟನೆ, ಆಯ್ಕೆ ಬಗ್ಗೆ ಅನುಮಾನ ಮೂಡುತ್ತದೆ' ಎಂದು ನಿತ್ಯಾ ಮೆನನ್ ಮಾತನಾಡಿದರು.
'ನಾನು ಟಿವಿ ಶೋ, ರಿಯಾಲಿಟಿ ಶೋಗಳನ್ನು ನೋಡೋದೆ ಇಲ್ಲ. ಯಾಕೆಂದರೆ, ಅವರಿಗೆ ಸಾಮಾಜಿಕ ಪ್ರಜ್ಞೆ ಇರಲ್ಲ. ಅವೆಲ್ಲವೂ ಗಾಸಿಪ್ಗೆ ಸಂಬಂಧಿಸಿದ ಮನರಂಜನೆಯಾಗಿರುತ್ತವೆ. ಆ ಗಾಸಿಪ್ ಒಬ್ಬ ವ್ಯಕ್ತಿ ಮೇಲೆ ನಕರಾತ್ಮಕವಾಗಿ ಪರಿಣಾಮ ಬೀರುತ್ತದೆ. ನೀವು ಕೂತು ಅವರಿವರ ಬಗ್ಗೆ ಮಾತನಾಡುತ್ತಾ, ಗಾಸಿಪ್ ಮಾಡ್ತಿದ್ರೆ ಖಂಡಿತ ಜೀವನದಲ್ಲಿ ಉತ್ತಮ ಭವಿಷ್ಯ ಕಾಣೋದಿಲ್ಲ. ಯಾರಾದರೂ ನನ್ನ ಬಳಿ ಬಂದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಏನು ಮಾಡಬೇಕು ಎಂದು ಕೇಳಿದರೆ ನಾನು ಮೊದಲು ಹೇಳೋದು ಒಂದೆ ನಿಮ್ಮನ್ನು ನೀವು ಹೀಗೆ ಕೇಳಿಕೊಳ್ಳಿ, ನಾನೇನಾದರೂ ಗಾಸಿಪ್ ಮಾಡ್ತಿದ್ದೀನಾ, ಯಾರ ಬಗ್ಗೆಯಾದರೂ ಜಡ್ಜ್ ಮಾಡುತ್ತಿದ್ದೇನಾ? ನಾವು ಕಾನ್ಷಿಯಸ್ ಆಗಿ ಮಾತನಾಡಬೇಕು. ಕಾಲ ಕ್ರಮೇಣ ನಮ್ಮ ಗುಣವನ್ನು ಬದಲಾಯಿಸಿಕೊಳ್ಳಬೇಕು. ಇದನ್ನು ನಾನು ಅಳವಡಿಸಿಕೊಂಡಿರುವ ಕಾರಣ ನಾನು ಇಂತಹ ಶೋ ಗಳು ನೋಡಲು ಇಷ್ಟ ಪಡಲ್ಲ' ಎಂದರು.
ಗೋಬಿನಾಥ್ ಅವರು ನಿತ್ಯಾ ಮೆನನ್ ಅವರಿಗೆ ಹೀಗೆ ಪ್ರಶ್ನೆ ಮಾಡಿದರು...'ಕಾಲಕ್ರಮೇಣ ಜಗತ್ತು ಲೋಕಜ್ಞಾನದ ಪಾಠ ಹೇಳಿಕೊಡುತ್ತದೆ. ಅವು ನಮ್ಮನ್ನು ಹೊಕ್ಕ ನಂತರ ಹಾಗೆ ಬದುಕಲು ಸಾಧ್ಯವಾಗುತ್ತದೆಯೋ ಇಲ್ಲವೋ. ಇವೆಲ್ಲವನ್ನೂ ಮೀರಿ ನಮಗೆ ಇಷ್ಟವಾದಂತೆ ಬದುಕುವುದು ಹೇಗೆ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ನಿತ್ಯಾ ಮೆನನ್, ನಾನು ಇರುವುದೇ ಹೀಗೆ'.. ಬೇರೆ ದಾರಿ ಇಲ್ಲ ನಾನು ನಾನಾಗಿಯೇ ಇರಬೇಕು.
'ಈಗಿನಂತೆ ಆಗ ಕರ್ಲಿ ಹೇರ್ ಟ್ರೆಂಡ್ ಇರಲಿಲ್ಲ. 15-16ನೇ ವಯಸ್ಸಿನಲ್ಲಿಯೇ ನನ್ನ ಕೂದಲಿನ ಬಗ್ಗೆ ಸಾಕಷ್ಟು ಟೀಕೆ ಇತ್ತು. ನನ್ನ ಹುಬ್ಬು ಕಪ್ಪಾಗಿದೆ ಎಂದು, ಕೂದಲಿನ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ನನ್ನ ಪೋಷಕರು ಸ್ಟ್ರೈಟ್ ಮಾಡಿಸಿಕೋ ಕೂದಲನ್ನು ಎನ್ನುತ್ತಿದ್ದರು. ಹೀಗಾಗಿ ನಾನು ಅದನ್ನು ವಿರೋಧಿಸುತ್ತಿದ್ದೆ. ನೈಸರ್ಗಿಕವಾಗಿ ನನಗೇನು ಕೂದಲಿದೆಯೋ ಅದೇ ಇರಲಿ, ನಾನ್ಯಾಕೆ ಬೇರೆಯವರ ಮಾತುಗಳಿಗೆ ಕಿವಿಗೊಟ್ಟು ಬದಲಾಯಿಸಿಕೊಳ್ಳಬೇಕು ಎಂದು ಗುಂಗುರು ಕೂದಲನ್ನು ಅಂದವಾಗಿ ತೋರ್ಪಡಿಸಿಕೊಳ್ಳಲು ಶುರು ಮಾಡಿದೆ' ಎಂದರು ನಿತ್ಯಾ ಮೆನನ್, (ಏಜೆನ್ಸೀಸ್).