ಸಿನಿವಾಣಿ

31 ಡೇಸ್​ನಲ್ಲಿ ಒಪೆರಾ ಸಾಂಗ್​; "ಜಾಲಿಡೇಸ್​' ಖ್ಯಾತಿಯ ನಿರಂಜನ್​ ಶೆಟ್ಟಿ ನಾಯಕನಾಗಿರುವ ಚಿತ್ರ

ಹರ್ಷವರ್ಧನ್ ಬ್ಯಾಡನೂರು

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಜಾಲಿಡೇಸ್​' ಖ್ಯಾತಿಯ ನಟ ನಿರಂಜನ್​ ಶೆಟ್ಟಿ ನಾಯಕನಾಗಿ ನಟಿಸಿರುವ ಚಿತ್ರ "31 ಡೇಸ್​'. ಚಿತ್ರದಲ್ಲಿ 10 ಹಾಡುಗಳಿದ್ದು, ವಿ. ಮನೋಹರ್​ ಸಂಗೀತ ನೀಡಿದ್ದಾರೆ. ಇದು ಅವರ 150ನೇ ಸಂಗೀತ ನಿರ್ದೇಶನದ ಸಿನಿಮಾ ಎಂಬುದು ವಿಶೇಷ. ಕೆಲ ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ರಾಜಾ ರವಿಕುಮಾರ್​ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಚಿತ್ರವಿದು.

ಇತ್ತೀಚೆಗಷ್ಟೆ "31 ಡೇಸ್​'ನ ಒಪೆರಾ ಸಾಂಗ್​ (ಕಥನ ಗೀತೆ) ರಿಲೀಸ್​ ಮಾಡಲಾಯಿತು. ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ ಹಾಡಿರುವ ಜತೆಗೆ ವಿ. ಮನೋಹರ್​ ನಟಿಸಿರುವುದು ಮತ್ತೊಂದು ವಿಶೇಷ. ಈ ಬಗ್ಗೆ ಮನೋಹರ್​, "ನನ್ನ ಪ್ರಕಾರ ಇದು ಕನ್ನಡದಲ್ಲಿ ಮೊದಲ ಒಪೆರಾ ಸಾಂಗ್​ ಎನ್ನಬಹುದು. ನಿರಂಜನ್​ ಒತ್ತಾಯಕ್ಕೆ ಮಣಿದು ಈ ಹಾಡಿನಲ್ಲಿ ನಟಿಸಿದ್ದೇನೆ' ಎಂದರು.

ನಾಯಕ ನಿರಂಜನ್​ ಶೆಟ್ಟಿ, ""ಜಾಲಿಡೇಸ್​'ನಿಂದ ಪ್ರಾರಂಭವಾದ ನನ್ನ ಸಿನಿಜರ್ನಿಗೆ ಈಗ 15 ವರ್ಷ. ನನ್ನ ಪತ್ನಿಯೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು 31 ದಿನಗಳಲ್ಲಿ ನಡೆಯುವ ಈಗಿನ ಕಾಲಟ್ಟದ ಪ್ರೇಮಕಥೆ. ಹಾಗಾಗಿ "31 ಡೇಸ್​' ಅಂತ ಟೈಟಲ್​ ಇಟ್ಟಿದ್ದೇವೆ. ಯಾರೂ ಊಹಿಸದ ಕ್ಲೆಮ್ಯಾಕ್ಸ್​ ಚಿತ್ರದಲ್ಲಿದೆ. ಇವತ್ತು ಎರಡೂವರೆ ನಿಮಿಷದ ಒಪೆರಾ ಸಾಂಗ್​ ರಿಲೀಸ್​ ಮಾಡಿದ್ದೇವೆ. ಆದರೆ, ಇದರಲ್ಲಿ ಒಂದು ನಿಮಿಷವನ್ನು ಮಾತ್ರ ಸಿನಿಮಾದಲ್ಲಿ ಬಳಸಿಕೊಂಡಿದ್ದೇವೆ' ಎಂದು ಮಾಹಿತಿ ನೀಡಿದರು.

ಸದ್ಯ ಚಿತ್ರ ಸೆನ್ಸಾರ್​ ಅಂಗಳದಲ್ಲಿದ್ದು, ಫೆಬ್ರವರಿಯಲ್ಲಿ ತೆರೆಗೆ ತರುವ ಆಲೋಚನೆ ಚಿತ್ರತಂಡದ್ದು. ಚಿತ್ರದಲ್ಲಿ ನಿರಂಜನ್​ಗೆ ಪ್ರಜ್ವಲಿ ಸುವರ್ಣ ನಾಯಕಿಯಾಗಿದ್ದು, ಆನೇಕಲ್​ ಮುನಿಯಪ್ಪ, ಗೋವಿಂದಸ್ವಾಮಿ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ವಿನುತ್​ ಛಾಯಾಗ್ರಹಣ, ತ್ರಿಭುವನ್​ ಮತ್ತು ಧನುಕುಮಾರ್​ ನೃತ್ಯನಿರ್ದೇಶನವಿರಲಿದೆ.