ಚಿತ್ರ: ನಿಂಬಿಯಾ ಬನಾದ ಮ್ಯಾಗ
ನಿರ್ದೇಶನ: ಅಶೋಕ ಕಡಬ
ತಾರಾಗಣ: ಷಣ್ಮುಖ ಗೋವಿಂದರಾಜ್, ತನುಶ್ರೀ, ಸಂಗೀತ ಅನಿಲ್, ಪದ್ಮಾ ವಾಸಂತಿ, ಮೂಗು ಸುರೇಶ್ ಮತ್ತಿತರರು
ಶಿವ ಸ್ಥಾವರಮಠ
ಗಂಡನದ್ದು ಸಹಜ ಸಾವಲ್ಲ, ಕೊಲೆ ಎಂದು ತಿಳಿದ ವರಲಕ್ಷ್ಮೀ (ಸಂಗೀತ ಅನಿಲ್) ಮಗುವಿನ ಮೇಲೂ ಶತ್ರುಗಳ ಕಣ್ಣು ಬೀಳಬಹುದು ಎಂದು ಅರಿತು, ಮನೆ ಕೆಲಸದಾಳಿನಿಂದ ಮಗನನ್ನು ಪಟ್ಟಣಕ್ಕೆ ಕಳುಹಿಸಿಕೊಡುತ್ತಾಳೆ. ಈ ವೇಳೆ ಮನೆಯಾಳು ಕೂಡ ಅನಾರೋಗ್ಯದಿಂದ ಸಾವಿಗೀಡಾಗುತ್ತಾನೆ. ಇದು ವರಲಕ್ಷ್ಮೀಗೆ ಬರಸಿಡಿಲು ಬಡಿದಂತಾಗುತ್ತದೆ. ಹೆತ್ತ ಮಗುವನ್ನು ಮತ್ತೆ ನೋಡಲಾಗದ ದುಸ್ಥಿತಿ. ಒಂದಲ್ಲ ಒಂದು ದಿನ ಮಗ ಬರಬಹುದು ಎಂದು ತಾಯಿ ಆತನಿಗಾಗಿ ಶಬರಿಯಂತೆ ಕಾಯುತ್ತಾಳೆ. 25 ವರ್ಷಗಳ ಬಳಿಕ ಮಗ ಅಚ್ಚಣ್ಣ (ಷಣ್ಮುಖ) ಮನೆಗೆ ಮರುಳುತ್ತಾನೆ. ತಾಯಿಗೆ ಮರುಜೀವ ಸಿಕ್ಕಂತಾಗುತ್ತದೆ. ಅದೇ ಸಮಯದಲ್ಲಿ ಮತ್ತೊಬ್ಬ ವ್ಯಕ್ತಿ ನಾನೇ ನಿಜವಾದ ಅಚ್ಚಣ್ಣ ಎಂದು ಮನೆಗೆ ಬರುತ್ತಾನೆ. ಹೀಗೆ ಒಂದೇ ಗತಿಯಲ್ಲಿ ಸಾಗುವ ಕಥೆಯೇ ‘ನಿಂಬಿಯಾ ಬನಾದ ಮ್ಯಾಗ ಪೇಜ್-1’.
ನಿರ್ದೇಶಕ ಅಶೋಕ ಕಡಬ ಮೊದಲ ಭಾಗದಲ್ಲಿ ಕಥೆಗಿಂತ ಹೆಚ್ಚು ಮಲೆನಾಡಿನ ಜನರ ಸಂಸ್ಕೃತಿ, ಜೀವನ ಹಾಗೂ ಪ್ರಕೃತಿ ಸೌಂದರ್ಯ ತೋರಿಸುವುದಕ್ಕೆ ಒತ್ತು ನೀಡಿದ್ದಾರೆ. ಮುಖ್ಯ ಕಥೆಯನ್ನು ಸೀಕ್ವೆಲ್‌ಗೆ ಉಳಿಸಿಕೊಂಡಿದ್ದಾರೆ. ಈ ನಡುವೆ ತಾಯಿ-ಮಗನ ಬಾಂಧವ್ಯದ ಭಾವುಕತೆ ಹಾಗೂ ಸಂಬಂಧಗಳಲ್ಲಿ ತಲೆದೋರುವ ವೈಷ್ಯಮ್ಯದ ಕುರಿತು ಹೇಳಿದ್ದಾರೆ. ಪ್ರಾರಂಭದಿಂದ ಕ್ಲೈಮ್ಯಾಕ್ಸ್‌ನವರೆಗೆ ಕಥೆಯು ಒಂದೇ ವೇಗದಲ್ಲಿ ಸಾಗುತ್ತದೆ. ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿ, ಸ್ವಲ್ಪ ಕಥೆಯ ಸುಳಿವು ಬಿಟ್ಟುಕೊಟ್ಟಿದ್ದರೆ, ಚಿತ್ರ ಇನ್ನಷ್ಟು ಆಪ್ತವಾಗುತ್ತಿತ್ತು. ಮಲೆನಾಡಿನ ಝರಿ-ತೊರೆಗಳು, ಕಾಡು, ತೋಟ, ಹೆಂಚಿನ ಮನೆ ಹಾಗೂ ಭಾಷೆಯು ಚೆನ್ನಾಗಿ ಮೂಡಿಬರುವಂತೆ ನೋಡಿಕೊಂಡಿದ್ದಾರೆ.
ಷಣ್ಮುಖ ಗೋವಿಂದರಾಜ್ ಮೊದಲ ಸಿನಿಮಾದಲ್ಲಿ ಗಮನಸೆಳೆಯುತ್ತಾರೆ. ಪಾತ್ರಕ್ಕೆ ಇನ್ನೊಂದಿಷ್ಟು ತರಬೇತಿ ಬೇಕು ಎನಿಸುತ್ತದೆ. ತನುಶ್ರೀ ಕೊಟ್ಟ ಪಾತ್ರ ನಿರ್ವಹಿಸಿದ್ದಾರೆ. ತಾಯಿ ಪಾತ್ರವನ್ನು ಸಂಗೀತ ಅನಿಲ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮೂಗು ಸುರೇಶ್, ಪದ್ಮಾ ವಾಸಂತಿ ಗಮನಸೆಳೆಯುತ್ತಾರೆ. ಇಡೀ ಮಲೆನಾಡಿನ ಪರಿಸರವನ್ನು ಸಿದ್ದು ಕೆಂಚನಹಳ್ಳಿ ಸಮರ್ಪಕವಾಗಿ ಸೆರೆಹಿಡಿದಿದ್ದು, ಇದೇ ಚಿತ್ರದ ಪ್ಲಸ್ ಪಾಯಿಂಟ್. ಕ್ಲೈಮ್ಯಾಕ್ಸ್‌ನಲ್ಲಿ ಕಥೆಗೆ ಟ್ವಿಸ್ಟ್ ನೀಡಲಾಗಿದ್ದು, ಮುಂದಿನ ಭಾಗದ ಕುತೂಹಲ ಹೆಚ್ಚಿಸುತ್ತದೆ.