ಒಂದೊಳ್ಳೆ ಲೈಫು, ಚಿಕ್ಕದಾದ್ರೂ ಚೊಕ್ಕ ಕೆಲಸ. ಅದ್ದೂರಿ ಅಲ್ಲದಿದ್ರೂ ಗೌರವವಾಗಿ ಬದುಕಿ, ಸ್ವಲ್ಪ ಉಳಿಸಿ ಕೂಡಿಡುವಷ್ಟು
ಆದಾಯ…. ಇಂತಹ ಸಣ್ಣ ಸಣ್ಣ ಕನಸುಗಳನ್ನು ಹೊತ್ತ ಎಷ್ಟೋ ಜೀವಗಳು ಇವುಗಳ ನನಸಿನ ಬಗ್ಗೆ ಪ್ರತಿನಿತ್ಯ ಕನವರಿಸುತ್ತಿರುತ್ತವೆ. ತೋಳಲ್ಲಿ ಶಕ್ತಿ ಇದ್ದರೂ ಏನು ಮಾಡಬೇಕೆಂಬ ಗೊಂದಲ, ಗೋಜಲು. ಏನು ಮಾಡಿದರೆ ಅದೇನು ಆಗುವುದೋ ಎಂಬ ಭಯ, ದುಗುಡ. ಈ ಆತಂಕ, ಭಯವನ್ನು ಗಂಟು ಮೂಟೆ ಕಟ್ಟಿ ಪಕ್ಕಕ್ಕಿಟ್ಟು ಮುನ್ನಡೆದ ಅದೆಷ್ಟೋ ಮಂದಿ ಕೇವಲ ಆತ್ಮವಿಶ್ವಾಸ ಎಂಬ ಬಂಡವಾಳ ಹೂಡಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಇಂತಹ ಹಲವು ಸ್ಪೂರ್ತಿದಾಯಕರ ಜತೆಗೆ ವಿಜಯವಾಣಿಯ ಅಪಾರ ಓದುಗರು ನ್ಯಾಯಮಾರ್ಗದಿಂದ ದುಡಿಮೆ ದುಪ್ಪಟ್ಟು ಮಾಡುವ ಬಗ್ಗೆ ತಮ್ಮ ಅನುಭವ, ಸಲಹೆಗಳನ್ನು ಧಾರೆ ಎರೆದಿದ್ದಾರೆ. ಹೊಸ ವರ್ಷದ ದಿನ ನೀವು ಓದುವ ಈ ಆತ್ಮವಿಶ್ವಾಸದ ಸೂತ್ರಗಳು ನಿಮ್ಮ ಜೀವನಕ್ಕೆ ಹೊಸ ದಾರಿಯಾಗಲಿ ಎಂಬುದು ವಿಜಯವಾಣಿ ಆಶಯ, ಕಳಕಳಿ.
ಶ್ರಮ ಶ್ರದ್ಧೆ ಇದ್ರೆ ಗೆದ್ದೆ
ಇಂದು ಆಯ್ಕೆಗೆ ಅನೇಕ ಕ್ಷೇತ್ರಗಳಿವೆ, ಆದರೆ ಎರಡೇ ದಿನಕ್ಕೆ ಬೇಸರಗೊಂಡು ಕ್ಷೇತ್ರ ಬದಲಾಯಿಸಿಬಿಡುತ್ತಾರೆ. ಹೀಗೆ
ಮಾಡುವ ಬದಲು ಸರಿಯಾದ ಕ್ಷೇತ್ರ ಆಯ್ಕೆ ಮಾಡಿಕೊಂಡು ಸಹನೆ, ತಾಳ್ಮೆ, ಶ್ರದ್ಧೆಯಿಂದ ಶ್ರಮ ವಹಿಸಿ ಕೆಲಸ ಮಾಡಬೇಕು. ನಾನೂ ಹೀಗೇ ಮಾಡಿದ್ದು. ಪರ್ಫಾರ್ವೆನ್ಸ್ಗೆ ಅವಕಾಶ ಇರುವ ಪಾತ್ರ ಆಯ್ಕೆ ಮಾಡಿ ಮಾಡಿ ನಂತರವೇ ಬಿಜಿಯಾಗಿದ್ದು. ಗುರುತಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಹಾಗಂತ ಯಾರೋ ಹೇಳಿದರು ಅಂತ ಅಡ್ಡದಾರಿ ಹಿಡಿಯಬಾರದು. ಶ್ರಮ ಹಾಗೂ ಶ್ರದ್ಧೆಯಿಂದ ಸಿಕ್ಕಿದ್ದು ಮಾತ್ರ ಬಹುಕಾಲ ಉಳಿಯುತ್ತದೆ.