ಸಿನಿವಾಣಿ

'ತಲೈವರ್​ 170' ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ಖ್ಯಾತ ನಟ!

ಮೋಹನ್​ ಶೆಟ್ಟಿ

ತಮಿಳುನಾಡು: ಸೂಪರ್​ಸ್ಟಾರ್​, ತಲೈವಾ ರಜನಿಕಾಂತ್​ ಅಭಿನಯದ 'ಜೈಲರ್'​ ನಿರೀಕ್ಷೆಗೂ ಮೀರಿದ ಗಳಿಕೆಯನ್ನು ಕಾಣುವುದರ ಜತೆಗೆ ಚಿತ್ರಮಂದಿರಗಳಲ್ಲಿ ಸತತ 4ನೇ ವಾರವು ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಸದ್ಯ ಈ ಭರ್ಜರಿ ಗೆಲುವಿನ ಬೆನ್ನಲ್ಲೇ ರಜನಿ ನಟಿಸಲಿರುವ 170ನೇ ಚಿತ್ರದ ಬಗ್ಗೆ ಇದೀಗ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ.

'ಜೈಲರ್'​ ಯಶಸ್ಸಿನ ಬೆನ್ನಲ್ಲೇ ಇದೀಗ ರಜನಿಕಾಂತ್ ನಟಿಸಲಿರುವ 170ನೇ ಚಿತ್ರ 'ತಲೈವರ್​ 170' ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಸಂಗತಿಗಳು ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. 'ಜೈ ಭೀಮ್' ಸಿನಿಮಾದ ನಿರ್ದೇಶಕ ಟಿ.ಜೆ. ಜ್ಞಾನವೇಲ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ಸ್ಟಾರ್​ ನಟರೊಬ್ಬರು ವಿಶೇಷ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ವದಂತಿಯೊಂದು ತಲೈವಾ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.

'ತಲೈವರ್ 170' ಚಿತ್ರದಲ್ಲಿ ನಟ ಶರ್ವಾನಂದ್ ಅಥವಾ ನಾನಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಊಹಾಪೋಹಗಳು ವ್ಯಾಪಕವಾಗಿ ಹರಿದಾಡಿವೆ. ಈ ಇಬ್ಬರು ನಟರ ಪೈಕಿ ಒಬ್ಬರು ರಜನಿಕಾಂತ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೀರಿದ ಸುದ್ದಿಯೊಂದು ಶರ್ವಾ ಅಥವಾ ನಾನಿ ಇಬ್ಬರೂ ನಟಿಸುವುದು ಅನುಮಾನ! ಅವರ ಬದಲಿಗೆ ನಟ ರಾಣಾ ದಗ್ಗುಬಾಟಿ ಅಭಿನಯಿಸಲಿದ್ದಾರೆ ಎಂದು ತಿಳಿಸಿದೆ. ಸದ್ಯ ಈ ಗೊಂದಲಗಳಿಗೆ ತೆರೆ ಎಳೆಯಲು ಚಿತ್ರತಂಡ ಅಧಿಕೃತ ಮಾಹಿತಿಯನ್ನು ಘೋಷಿಸುವವರೆಗೂ ಕಾಯಬೇಕಿದೆ.

ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬರಲಿರುವ 'ತಲೈವರ್ 170' ಚಿತ್ರದಲ್ಲಿ ಫಹದ್ ಫಾಸಿಲ್, ಮಂಜು ವಾರಿಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಮ್ಯೂಸಿಕ್​ ಕಂಪೋಸ್​ ಮಾಡಲಿದ್ದಾರೆ,(ಏಜೆನ್ಸೀಸ್).