ಸಿನಿವಾಣಿ

ಹೊಸ ಪ್ರತಿಭೆಗಳ ‘ಆರ್‌ಪಿ’: ಚಿತ್ರದ ಟೈಟಲ್ ಟೀಸರ್ ಬಿಡುಗಡೆ

ಬೆಂಗಳೂರು: ಹೊಸ ಪ್ರತಿಭೆ ಎಸ್. ಯುವರಾಜ್ ನಟಿಸುವ ಜತೆಗೆ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶಿಸುತ್ತಿರುವ ಸಿನಿಮಾವೇ ‘ಆರ್‌ಪಿ’. ಇದೊಂದು ಹೊಸಬರ ಚಿತ್ರವಾಗಿದ್ದು, ಪ್ರಚಾರದ ಮೊದಲ ಭಾಗವಾಗಿ ಸಿನಿಮಾದ ಟೈಟಲ್ ಟೀಸರ್‌ನ್ನು ಮಧುಸೂದನಾನಂದಪುರಿ ಪೀಠಾಧಿಕಾರಿ ಡಾ.ಆಚಾರ್ಯ ಮಹಾಮಂಡಲೇಶ್ವರ ಸ್ವಾಮೀಜಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.

ಗರುಡವೊಂದು ಹಾರಿ ಬರುವುದು, ಸಾಕ್ಷತ್ ಶಿವನ ಪಾದ, ತ್ರಿಶೂಲ ಜತೆಗೆ ಬೆಂಕಿ ಉಂಡೆಯಂತೆ ಶೀರ್ಷಿಕೆ ಕಾಣುತ್ತದೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಕುತೂಹಲ ಮೂಡಿಸುತ್ತದೆ. ಯುವರಾಜ್, ‘ನನ್ನ ಸ್ನೇಹಿತರ ಜೀವನದಲ್ಲಿ ನಡೆದ ಹಾಗೂ ನಡೆಯುತ್ತಿರುವ ಒಂದಷ್ಟು ಘಟನೆಗಳನ್ನು ಇಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ಅದಕ್ಕಾಗಿ ‘ಆರ್‌ಪಿ’ ಎಂದು ಶೀರ್ಷಿಕೆ ಇಡಲಾಗಿದೆ. ಪ್ರಕೃತಿ ನಾಶವಾಗುತ್ತಿದ್ದರೂ ಅದನ್ನು ನಾವು ಮರೆಯುತ್ತಿದ್ದೇವೆ. ಇದು ಶುರುವಾಗುವುದು ಹಗಲಲ್ಲಿ, ರಾತ್ರಿ ಇದಕ್ಕೆ ವಿರುದ್ಧವಾಗಿ ಕೆಟ್ಟದು ನಡೆಯುತ್ತದೆ. ಇಷ್ಟು ಮಾತ್ರ ಹೇಳಬಹುದು’ ಎಂದರು. ತಾರಾಗಣ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಮೊದಲ ಹಂತದಲ್ಲಿ ಬಾಲ ನಟರಾದ ಆರ್.ನಿಖಿಲ್ ಮತ್ತು ದಕ್ಷಿತ್‌ಗೌಡ ಆಯ್ಕೆಯಾಗಿದ್ದಾರೆ. ಈ ಸಿನಿಮಾವು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಮೂಡಿಬರಲಿದೆ.