ಸಿನಿವಾಣಿ

'ಇಬ್ಬರ ನಡುವಿನ ಮುದ್ದಿನ ರಾಣಿ' ಯಾರು?

ಬೆಂಗಳೂರು: 90ರ ದಶಕದಲ್ಲಿ 'ಇಬ್ಬರ ಹೆಂಡಿರ ಮುದ್ದಿನ ಪೊಲೀಸ್​', 'ಎದುರುಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ' ಮುಂತಾದ ಹಲವು ಲವ್​ ಕಂ ಕಾಮಿಡಿ ಚಿತ್ರಗಳು ಬಿಡುಗಡೆಯಾಗಿವೆ. ಈಗ ಬಹಳ ವರ್ಷಗಳ ನಂತರ 'ಇಬ್ಬರ ನಡುವೆ ಮುದ್ದಿನ ರಾಣಿ' ಎಂಬ ಉದ್ದ ಹೆಸರಿನ ಲವ್​ ಕಂ ಕಾಮಿಡಿ ಚಿತ್ರವು ಶುರುವಾಗಿದೆ.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ದೊಡ್ಡಬಳ್ಳಾಪುರ ಬಳಿಯಿರುವ ಅಂಗಾಸನ ರೆಸಾರ್ಟ್ ನಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ವೈಎಸ್​​ಆರ್​ಸಿಪಿ ರಾಜ್ಯ ಜಂಟಿ ಕಾರ್ಯದರ್ಶಿ ಕರ್ಮೂರು ವೆಂಕಟ ರೆಡ್ಡಿ ಆರಂಭ ಫಲಕ ತೋರುವ ಮೂಲಕ ಚಾಲನೆ ‌ನೀಡಿದರು. ಈ ಚಿತ್ರವು ಕನ್ನಡ ‌ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ಇದೊಂದು ಹೊಸ ತಂಡವಾಗಿದ್ದು, ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸೌರಭ್ ಕಿಶೋರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಎಂ.ಎಸ್.ಎನ್ ರಾಜಾ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.

ನಿರ್ಮಾಪಕ ಸೌರಭ್ ಕಿಶೋರ್ ಅವರು ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಆಕಾಶ್ ಆರಾಧ್ಯ, ದಿವ್ಯ ರಾವ್, ರೂಪ ರಾಯಪ್ಪ, ಸಂಜನ ನಾಯ್ಡು, ಮಹೇಂದರ್, ವಿಕ್ಚರಿ ವಾಸು, ಶೇಷಗಿರಿ, ಅಂಜಲಿ, ಲೋರ ಮುಂತಾದವರು ನಟಿಸುತ್ತಿದ್ದಾರೆ.

ಬೆಂಗಳೂರು, ದೊಡ್ಡಬಳ್ಳಾಪುರ, ಮಡಿಕೇರಿ ಮುಂತಾದ ಕಡೆ ೧೫ ‌ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳಿರುವ ಈ‌ ಚಿತ್ರಕ್ಕೆ ಎಂ.ಎಂ.ಮೋಹನ್ ಸಂಗೀತ ನೀಡುತ್ತಿದ್ದಾರೆ.