ಸಿನಿವಾಣಿ

ನನ್ನನ್ನು ಅತಿ ಕೆಟ್ಟ ಚಟಕ್ಕೆ ನೂಕಿದ್ದೇ ರೇವ್​ ಪಾರ್ಟಿಗಳು! ಅಂಥಾ ಸ್ನೇಹಿತರೇ ನನಗೆ ಬೇಡವೆಂದ ಶ್ರುತಿ

ಚೆನ್ನೈ​: ಸಕಲಕಲಾವಲ್ಲಭ ಕಮಲ್​ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್​, ಗ್ಲಾಮರ್​ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಇನ್ನು ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸುದ್ದಿಯಾಗಿದ್ದಾರೆ. ಎರಡು ವರ್ಷ ಡೇಟಿಂಗ್​ ಮಾಡಿ ಬಾಯ್​ಪ್ರೆಂಡ್​ ಮೈಕಲ್​ ಕೊರ್ಸಲೆ ಜತೆ ಬ್ರೇಕಪ್​ ಮಾಡಿಕೊಂಡಿದ್ದರು. ಇದೀಗ ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಶ್ರುತಿ, ಶಂತನು ಹಜಾರಿಕಾ ಜತೆ ಡೇಟಿಂಗ್​ ಮಾಡುತ್ತಿದ್ದಾರೆ. ಇದರ ಜೊತೆಗೆ ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಹಳ ಸದ್ದು ಮಾಡಿದ ಕೆಜಿಎಫ್​ ಖ್ಯಾತಿಯ ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್ ನಿರ್ದೇಶನದ ಹಾಗೂ ನಟ ಪ್ರಭಾಸ್​ ಅಭಿನಯದ ಸಲಾರ್​ ಸಿನಿಮಾದಲ್ಲಿ ಶ್ರುತಿ ಹಾಸನ್​ ನಾಯಕಿಯಾಗಿ ನಟಿಸಿದ್ದಾರೆ. ಸೂಪರ್​ ಸ್ಟಾರ್​ ಕಮಲ್​ ಹಾಸನ್​ ಮಗಳಾದರೂ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಶ್ರುತಿ ಇದೀಗ ತಮ್ಮ ಜೀವನದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ರೇವ್ ಪಾರ್ಟಿಗಳು ಮತ್ತು ರಾತ್ರಿ ಪಾರ್ಟಿಗಳು ಚಲನಚಿತ್ರ ಸಂಸ್ಕೃತಿಯ ಭಾಗವೆಂಬುದು ಎಲ್ಲರಿಗು ತಿಳಿದಿದೆ. ಈ ಪಾರ್ಟಿಗಳು ನಟಿ ಶ್ರುತಿ ಅವರನ್ನು ಅತಿಯಾಗಿ ಕುಡಿಯುವ ಅಭ್ಯಾಸಕ್ಕೆ ಸುಲಭವಾಗಿ ನೂಕಿತು ಎಂದಿದ್ದಾರೆ. ಕಂಠಪೂರ್ತಿ ಕುಡಿಯುತ್ತಿದ್ದ ಶ್ರುತಿ, ತಮ್ಮ ದೃಢ ವಿಶ್ವಾಸದಿಂದ ಇದೀಗ ಮದ್ಯ ವ್ಯಸನದಿಂದ ಹೊರಬಂದಿದ್ದಾರೆ. ಆದರೆ, ಆ ದಿನಗಳು ಇಂದಿಗೂ ನೆನೆಪಿಸಿಕೊಂಡರೆ ಬೇಸರವಾಗುತ್ತದೆ ಎನ್ನುತ್ತಾರೆ ಶ್ರುತಿ.

ಪಾರ್ಟಿಗಳಿಗೆ ನನ್ನ ವಿರೋಧವಿಲ್ಲ ಆದರೆ, ಕುಡಿಯದೇ ಇರುವವರಿಗೆ ಪಾರ್ಟಿಗಳು ಯಾವಾಗಲೂ ಕಷ್ಟಕರವಾದ ಸ್ಥಳವಾಗಿದೆ. ನಾನು ಕಳೆದ ಎಂಟು ವರ್ಷಗಳಿಂದ ಮದ್ಯಪಾನದಿಂದ ದೂರವಿದ್ದೇನೆ. ಆದರೆ, ಒಂದು ಕಾಲದಲ್ಲಿ ಆಲ್ಕೋಹಾಲ್ ನನ್ನ ಜೀವನದ ದೊಡ್ಡ ಭಾಗವಾಗಿತ್ತು. ನಿರಂತರ ಪಾರ್ಟಿಗಳು ಕುಡಿತದ ಚಟವನ್ನು ಇನ್ನಷ್ಟು ಹದಗೆಡಿಸಿತು. ಆದರೆ ಒಂದು ಹಂತದಲ್ಲಿ, ಮದ್ಯಪಾನದಿಂದ ನನಗೆ ಒಳ್ಳೆಯದಾಗುತ್ತಿಲ್ಲ ಎಂದು ಕಂಡುಕೊಂಡ ಬಳಿಕ ಪಾರ್ಟಿಗಳಿಂದ ದೂರವಿರಲು ಪ್ರಾರಂಭಿಸಿದೆ ಎಂದಿದ್ದಾರೆ.

ನಾನು ವಿಪರೀತ ಕುಡಿಯುತ್ತಿದ್ದೆ. ಈ ವ್ಯಸನದಿಂದ ಹೊರಬರಲು ಸಾಕಷ್ಟು ಶ್ರಮಪಡಬೇಕಾಯಿತು. 8 ವರ್ಷಗಳಿಂದ ಮದ್ಯ ಸೇವನೆ ಮಾಡುತ್ತಿಲ್ಲ. ಮದ್ಯಪಾನವಷ್ಟೇ ನಾನೆಂದಿಗೂ ಡ್ರಗ್ಸ್ ಆಗಲಿ ಅಥವಾ ಸಿಗರೇಟ್ ಆಗಲಿ ಬಳಸಿಲ್ಲ. ಪಾರ್ಟಿಗಳಿಗೆ ಹಾಜರಾಗುವಂತೆ ನನ್ನನ್ನು ಒತ್ತಾಯಿಸುವ ಸ್ನೇಹಿತರಿಂದ ದೂರ ಇರುತ್ತಿದ್ದೇನೆ. ಅಂಥಾ ಸ್ನೇಹಿತರೆ ನಮಗೆ ಬೇಡ ಎಂದು ಹೇಳಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಶ್ರುತಿ ನಟನೆಯ ಸಲಾರ್​ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿದೆ. ಸದ್ಯ ಅಡಿವಿ ಶೇಷ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾಗೆ ಶ್ರುತಿ ಸಹಿ ಮಾಡಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಆದರೆ, ಈ ಸಿನಿಮಾ ಟೈಟಲ್​ ಇನ್ನೂ ಘೋಷಣೆಯಾಗಿಲ್ಲ. ಮೇಜರ್​ ಬಳಿಕ ಅಡಿವಿ ಶೇಷ ಅವರ ಎರಡನೇ ಹಿಂದಿ ಸಿನಿಮಾ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ದಿ ಐ ಹೆಸರಿನ ಹಾಲಿವುಡ್​ ಸಿನಿಮಾದಲ್ಲೂ ಶ್ರುತಿ ನಟಿಸುತ್ತಿದ್ದಾರೆ ಎಂದು ಕೇಳಿಬಂದಿದೆ. (ಏಜೆನ್ಸೀಸ್​)