ಸಿನಿವಾಣಿ

ರಜನಿಕಾಂತ್​ 169ನೇ ಸಿನಿಮಾಗೆ ನಿರ್ದೇಶಕ ಫಿಕ್ಸ್? ಮುಂಬರುವ ಸಂಕ್ರಾಂತಿಗೆ ಸಿನಿಮಾ ರಿಲೀಸ್?

ದಕ್ಷಿಣ ಭಾರತದ ಸೂಪರ್​ ಸ್ಟಾರ್​ ನಟ ರಜನಿಕಾಂತ್​ಗೆ 71 ಆದರೂ ಆವರು ಈಗಲೂ ಸಿನಿಮಾಗಳಲ್ಲಿ ನಟಿಸುತ್ತಲೆ ಇದ್ದಾರೆ. ಹೌದು, ಇಲ್ಲಿಯವರೆಗೆ ರಜನಿ 168 ಸಿನಿಮಾಗಳಲ್ಲಿ ನಟಿಸಿ ತಮ್ಮ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇನ್ನು, ಇತ್ತೀಚೆಗೆ ಬಿಡುಗಡೆಯಾದ ನಟ ರಜನಿ ಅವರ ‘ಅಣ್ಣಾಥೆ’ ಸಿನಿಮಾ ಕೂಡಾ ಸೂಪರ್ ಹಿಟ್​ ಆಗಿದ್ದು, ಸದ್ಯ ರಜನಿಕಾಂತ್ ಅವರ 169ನೇ ಸಿನಿಮಾದ ಬಗ್ಗೆ ಚರ್ಚೆಗಳು ಬಹಳ ಜೋರಾಗಿಯೇ ನಡೆಯುತ್ತಿವೆ.
ಆ ಸಿನಿಮಾ ಯಾವುದು, ಟೈಟಲ್ ಏನು? ನಿರ್ದೇಶಕ ಯಾರು ಎಂಬ ಹಲವು ವಿಚಾರಗಳನ್ನು ಕುರಿತ ಕುತೂಹಲ ರಜನಿ ಅಭಿಮಾನಿಗಳನ್ನು ಈಗಾಗಲೇ ಕಾಡುತ್ತಿವೆ. ಹಾಗಾಗಿ, ರಜನಿ ಅಭಿಮಾನಿಗಳಿಗೆ ಈಗ ಒಂದು ಖುಷಿಯ ಸುದ್ದಿ ಹೊರಬಿದ್ದಿದೆ. ರಜನಿ ಅವರ 169 ಚಿತ್ರಕ್ಕೆ ಒಬ್ಬ ಯುವ ನಿರ್ದೇಶಕ ಆಯ್ಕೆ ಆಗಿದ್ದಾರಂತೆ. ಹೌದು, ‘ಬೀಸ್ಟ್’ ಚಿತ್ರದ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್ ಅವರೆ ಈ ಚಿತ್ರಕ್ಕೂ ನಿರ್ದೇಶಕರಂತೆ. ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್ ಅವರು ರಜನಿ ಜತೆ ಕೈಜೋಡಿಸುತ್ತಿದ್ದಾರೆ ಅನ್ನೋದು ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ ಎಂದೇ ಹೇಳಬೇಕು.
ರಜನಿಕಾಂತ್ ಅವರ 169ನೇ ಚಿತ್ರ ಒಂದು ವಿಶೇಷ ಸಿನಿಮಾ ಆಗಿರಲಿದ್ದು, ಏಪ್ರಿಲ್ ಅಥವಾ ಮೇ ತಿಂಗಳ ಆರಂಭದಲ್ಲಿ ಶೂಟಿಂಗ್ ಆರಂಭಿಸಲಿದೆ. ಇನ್ನು, ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ರಜನಿ ಅವರ ಈ 169ನೇ ಸಿನಿಮಾ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ಸ್ವತಃ ಚಿತ್ರತಂಡ ತಿಳಿಸಿದೆ. ಜತೆಗೆ, ಒಂದು ವಿಶೇಷ ವಿಡಿಯೋದೊಂದಿಗೆ 169ನೇ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆಯಂತೆ. ಈ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಿಸಲಿದ್ದು, ಅನಿರುದ್ಧ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಉಳಿದ ಪಾತ್ರ ವರ್ಗದ ಬಗ್ಗೆ ಹೆಚ್ಚು ಮಾಹಿತಿಗಾಗಿ ಸಿನಿ ಪ್ರೇಕ್ಷಕರು ಇನ್ನೊಂದಿಷ್ಟು ದಿನ ಕಾಯಬೇಕಿದೆ.