ಸಿನಿವಾಣಿ

ಹೊಸ ಮನೆಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲಿದ್ದಾರಾ, ನಟಿ ನಯನತಾರಾ?!

ಚೆನ್ನೈ: ಬಹುಭಾಷಾ ಕಲಾವಿದೆಯಾಗಿ ಜನಪ್ರಿಯರಾಗಿರುವ ಲೇಡಿ ಸೂಪರ್​​ಸ್ಟಾರ್​ ನಯನ್​ತಾರಾ ಇತ್ತೀಚೆಗೆ ತಮಿಳುನಾಡಿನ ರಾಜಧಾನಿಯ ಪಾಶ್​ ಬಡಾವಣೆಯೊಂದರಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಈ ಮನೆಗೆ ಸದ್ಯದಲ್ಲೇ ಸ್ಥಳಾಂತರಗೊಳ್ಳಲಿರುವ ನಟಿಯು ತಮ್ಮ ಫಿಯಾನ್ಸಿ ನಿರ್ದೇಶಕ ವಿಘ್ನೇಶ್​ ಶಿವನ್​ ಜೊತೆ ವೈವಾಹಿಕ ಜೀವನವನ್ನೂ ಆರಂಭಿಸಲಿದ್ದಾರೆಯೇ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ.

ಮಾಜಿ ಸಿಎಂ ಜಯಲಲಿತಾ, ತಮಿಳು ಸೂಪರ್​ಸ್ಟಾರ್​ ರಜನೀಕಾಂತ್​​ ಮತ್ತಿತರರ ಗಣ್ಯರ ಬಂಗಲೆಗಳಿರುವ ಚೆನ್ನೈನ ಪೋಯೆಸ್​ ಗಾರ್ಡನ್​ ಪ್ರದೇಶದಲ್ಲಿ ನಯನ್​, ನಾಲ್ಕು ಬೆಡ್​ರೂಂ ಮನೆ ಖರೀದಿಸಿದ್ದಾರೆ. ಈ ದುಬಾರಿ ಮನೆಗೆ ತಮ್ಮ ಫಿಯಾನ್ಸಿ ಶಿವನ್​ ಜೊತೆ ವಾಸಕ್ಕಾಗಿ ತೆರಳಲಿದ್ದಾರೆ ಎಂದು ವರದಿಗಳು ಹೇಳಿವೆ. ಕಳೆದ ದಿನಗಳಲ್ಲಿ 37 ವರ್ಷ ತುಂಬಿದ ನಟಿಯು ಈ ವರ್ಷದ ಮೊದಲಲ್ಲಿ ಸದ್ದಿಲ್ಲದೆ ಶಿವನ್​ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆ ಬಗ್ಗೆ ಮಾತನಾಡಿದ ಅವರು ತಮ್ಮ ಮದುವೆ ಯಾವಾಗ ಎಂದು ಅಭಿಮಾನಿಗಳಿಗೆ ತಿಳಿಸುವುದಾಗಿ ಹೇಳಿದ್ದರು ಎನ್ನಲಾಗಿದೆ.

ಶಿವನ್​ ನಿರ್ದೇಶನದ 'ಕಾದುವಾಕುಲ ರೆಂಡು ಕಾದಲ್​' ಚಿತ್ರದಲ್ಲಿ, ಶಾರುಖ್​ ಖಾನ್​ರ ಲಯನ್​ ಮತ್ತು ಅಶ್ವಿನ್​ ಶರವಣನ್​ರ ಕನೆಕ್ಟ್​ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಯನ್​ತಾರಾ ತಮ್ಮ ಹಾಲಿ ಸಿನಿ ಪ್ರಾಜೆಕ್ಟ್​ಗಳು ಮುಗಿದ ನಂತರ ಹಸೆಮಣೆ ಏರಲಿದ್ದಾರೆ ಎಂದು ಭಾವಿಸಲಾಗಿದೆ. ಆ ವಿಶೇಷ ಕ್ಷಣಗಳೂ ಹೊಸ ಮನೆಯ ಗೃಹಪ್ರವೇಶದೊಂದಿಗೇ ಬರಲಿವೆಯೇ ಎಂದು ಕಾದುನೋಡಬೇಕು. (ಏಜೆನ್ಸೀಸ್)