ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಕೆಲವೇ ಚಿತ್ರಗಳಲ್ಲಿ ನಟಿಸಿದ್ದರೂ "ಗುಳ್ಟೂ', "ಕ್ಷೇತ್ರಪತಿ', "ಹೊಂದಿಸಿ ಬರೆಯಿರಿ', "ನೋಡಿದವರು ಏನಂತಾರೆ' ಚಿತ್ರಗಳಲ್ಲಿ ನಾಯಕನಾಗಿ, "ಸಲಾರ್', "ಹೊಯ್ಸಳ' ಸಿನಿಮಾಗಳಲ್ಲಿ ಖಳನಾಯಕನಾಗಿ ತಮ್ಮದೇ ಛಾಪು ಮೂಡಿಸಿರುವ ನಟ ನವೀನ್ ಶಂಕರ್. ಇದೀಗ ಮತ್ತೆ ವಿಲನ್ ಆಗಿ ಮಿಂಚಲು ರೆಡಿಯಾಗಿದ್ದಾರೆ. ಶಿವರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ 131ನೇ ಚಿತ್ರಕ್ಕೆ ಕಾರ್ತಿಕ್ ಅದ್ವೈತ್ ಆ್ಯಕ್ಷನ್-ಕಟ್ ಹೇಳುತ್ತಿದ್ದು, ನವೀನ್ ಶಂಕರ್ "ಚಾರ್ಲಿ' ಎಂಬ ಖಡಕ್ ಖಳನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೆ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಚಾರ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ನಟನಿಗೆ ಶುಭಹಾರೈಸಿದೆ.
ಈ ಬಗ್ಗೆ ನವೀನ್, "ನಿರ್ದೇಶಕ ಕಾರ್ತಿಕ್ "ಗುಳ್ಟೂ' ಸಿನಿಮಾ ನೋಡಿ "ಚಾರ್ಲಿ' ಪಾತ್ರಕ್ಕೆ ನಾನು ಸೂಟ್ ಆಗುತ್ತೇನೆ ಅಂತ ಕರೆ ಮಾಡಿದ್ದರು. ಕಥೆ, ಪಾತ್ರ ಇಷ್ಟವಾಯಿತು. ಜತೆಗೆ ಶಿವಣ್ಣ ಬೇರೆ ಇದ್ದಾರೆ. ಮೊದಲ ಬಾರಿಗೆ ಅವರ ಜತೆ ನಟಿಸುವ ಉತ್ತಮ ಅವಕಾಶ ಅಂತ ಒಪ್ಪಿಕೊಂಡೆ. ನೆಗೆಟಿವ್ ಆಗಿದ್ದರೂ ಸ್ವ್ಯಾಗ್ ಇರುವ ಪಾತ್ರ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಆಗಿದೆ. ಒಂದು ದಿನ ಶಿವಣ್ಣ ಜತೆ ಕಾಂಬಿನೇಷನ್ನಲ್ಲೂ ನಟಿಸಿದ್ದೇನೆ. ಅವರ ಜತೆ ಕೆಲಸ ಈಜಿ ಅಂತನ್ನಿಸುತ್ತದೆ. ಶಿವಣ್ಣ ಆರಾಮಾಗಿರುತ್ತಾರೆ. ಆದರೆ, ಅವರ ಜತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಉತ್ಸಾಹ ನನ್ನಲ್ಲಿ ಜಾಸ್ತಿ ಇತ್ತು' ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ನವೀನ್ ನಾಯಕನಾಗಿ ಎರಡು ಕಥೆಗಳನ್ನು ಒಪ್ಪಿಕೊಂಡಿದ್ದಾರಂತೆ. "ಈ ವರ್ಷ "ನೋಡಿದವರು ಏನಂತಾರೆ' ಒಳ್ಳೆ ಪ್ರಾರಂಭ ನೀಡಿತು. ಹೆಚ್ಚು ಪ್ರಚಾರ ಮಾಡದಿದ್ದರೂ ಚಿತ್ರವನ್ನು ಪ್ರೇಕ್ಷಕರು, ವಿಮರ್ಶಕರು ಒಪ್ಪಿಕೊಂಡು, ಅಪ್ಪಿಕೊಂಡರು. ಥಿಯೇಟರ್ಗಳಲ್ಲಿ ಸಿನಿಮಾ 25 ದಿನ ಪೂರೈಸಿತು. ಒಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸದ್ಯ ಪ್ರತಿ ವಾರ ಮೂರ್ನಾಲ್ಕು ಕಥೆ ಕೇಳುತ್ತಿದ್ದೇನೆ. ಎರಡು ಕಥೆಗಳಿಗೆ ಓಕೆ ಮಾಡಿದ್ದೇನೆ. ಇನ್ನು ಮೂರು ತಿಂಗಳಲ್ಲಿ ಒಂದು ಸಿನಿಮಾ ಅಧಿಕೃತವಾಗಿ ಘೋಷಣೆಯಾಗಲಿದೆ. ಆ ಚಿತ್ರದಲ್ಲಿ ಎರಡು ಲುಕ್ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.
ಒಟಿಟಿ, ಟಿವಿ ರೈಟ್ಸ್ಗಾಗಿ ಸಿನಿಮಾ ಮಾಡುವವರ ಮಧ್ಯೆ ಥಿಯೇಟರ್ ಮುಖ್ಯ ಎನ್ನುವ ನವೀನ್, "ಜನರನ್ನು ಥಿಯೇಟರ್ಗೆ ಕರೆತರುವಂತಹ ಸಿನಿಮಾ ಮಾಡಬೇಕು. ಒಟಿಟಿ, ಟಿವಿ ಬಿಟ್ಟು ಥಿಯೇಟರ್ಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡಬೇಕು. ನೀವು ಸರ್ಕಸ್ ಮಾಡ್ತೀರಾ? ಧ್ಯಾನ ಮಾಡ್ತೀರಾ? ಗೊತ್ತಿಲ್ಲ. ಆದರೆ, ಜನರನ್ನು ಥಿಯೇಟರ್ಗೆ ಬರುವಂತೆ ಮಾಡಬೇಕು. ಹೀಗಾಗಿಯೇ ಜಾನರ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಒಬ್ಬ ಪ್ರೇಕ್ಷಕನಾಗಿ ಕಥೆ ಕೇಳುತ್ತೇನೆ. ಕಥೆ ಕುತೂಹಲ ಮೂಡಿಸಬೇಕು. ಮನರಂಜನೆ ನೀಡಬೇಕು. ಕಥೆ ಕೇಳುವಾಗಲೇ ನಾನು ಸಿನಿಮಾನೂ ನೋಡುತ್ತಿರುತ್ತೇನೆ. ಅದು ಇಷ್ಟವಾದರೆ ಒಪ್ಪಿಕೊಳ್ಳುತ್ತೇನೆ' ಎನ್ನುತ್ತಾರೆ.