ಸಿನಿವಾಣಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ; ಫಾಲ್ಕೆ ಪ್ರಶಸ್ತಿ ಪಡೆದ ರಜನಿಕಾಂತ್

Webdesk - Ravikanth

ಕಳೆದ ಏಪ್ರಿಲ್​ನಲ್ಲೇ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಯಾಗಿತ್ತು. ಆದರೆ, ಕರೊನಾ 2ನೇ ಅಲೆಯಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೆ ಹೋಗುತ್ತಲೇ ಇತ್ತು. ಸೋಮವಾರ ಕೊನೆಗೂ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಈ ಸಂದರ್ಭದಲ್ಲಿ ರಜನಿಕಾಂತ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ತಮ್ಮ ಮಾರ್ಗದರ್ಶಕ ಮತ್ತು ಗುರು ಕೆ. ಬಾಲಚಂದರ್ ಅವರಿಗೆ ಅರ್ಪಿಸಿದ ರಜನಿಕಾಂತ್, ಈ ಸಂದರ್ಭದಲ್ಲಿ ಬಸ್ ಚಾಲಕ ಹಾಗೂ ಮಿತ್ರನನ್ನೂ ನೆನೆದರು. ‘ಈ ಪ್ರಶಸ್ತಿಯನ್ನು ನನ್ನ ಗುರು ಕೆ.ಬಾಲಚಂದರ್ ಅವರಿಗೆ ಅರ್ಪಿಸುತ್ತೇನೆ. ನನ್ನಲ್ಲಿ ಉನ್ನತ ಮೌಲ್ಯಗಳು ಮತ್ತು ಆಧ್ಯಾತ್ಮಿಕತೆಯನ್ನು ತುಂಬಿದ ನನ್ನ ಸೋದರ ಸತ್ಯನಾರಾಯಣ ಗಾಯಕ್​ವಾಡ್ ಅವರನ್ನು ನೆನೆಯುತ್ತೇನೆ ಎಂದು ರಜನೀಕಾಂತ್ ಹೇಳಿದರು. ವಿಶೇಷವೆಂದರೆ, ಈ ಸಂದರ್ಭದಲ್ಲಿ ರಜನಿಕಾಂತ್ ಅವರ ಅಳಿಯ ಮತ್ತು ತಮಿಳು ನಟ ಧನುಶ್ ಅವರಿಗೆ ‘ಅಸುರನ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ನು, ‘ಮಣಿಕರ್ಣಿಕಾ’ ಚಿತ್ರದಲ್ಲಿನ ಅಭಿನಯಕ್ಕಾಗಿ ಕಂಗನಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದು, ಇದು ಅವರ ನಾಲ್ಕನೆಯ ರಾಷ್ಟ್ರ ಪ್ರಶಸ್ತಿಯಾಗಿದೆ. ಮನೋಜ್ ಬಾಜಪೇಯಿ, ವಿಜಯ್ ಸೇತುಪತಿ, ಡಿ. ಇಮಾನ್ ಸೇರಿದಂತೆ ಹಲವರಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಚಿವ ಅನುರಾಗ್ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು

2019ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಸಿಕ್ಕಿವೆ. ಈ ಪೈಕಿ ‘ಅಕ್ಷಿ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ ಸಿಕ್ಕಿದೆ. ಚಿತ್ರತಂಡದ ಪರವಾಗಿ ನಿರ್ವಪಕ ಕಲಾದೇಗುಲ ಶ್ರೀನಿವಾಸ್ ಮತ್ತು ನಿರ್ದೇಶಕ ಮನೋಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಸಾಹಸ ನಿರ್ದೇಶನಕ್ಕಾಗಿ ವಿಕ್ರಮ್ ಮೋರ್ ಪ್ರಶಸ್ತಿ ಪಡೆದಿದ್ದಾರೆ. ಈ ಹಿಂದೆ, ‘ಕೆಜಿಎಫ್’ ಚಿತ್ರದ ಸಾಹಸ ನಿರ್ದೇಶನಕ್ಕೂ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದ ವಿಕ್ರಮ್ೆ ಇದು ಎರಡನೇ ಪ್ರಶಸ್ತಿ. ತುಳು ಚಿತ್ರ ‘ಪಿಂಗಾರಾ’ ಚಿತ್ರಕ್ಕೂ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕರೆ, ಹಿರಿಯ ನಿರ್ದೇಶಕ ಪಿ.ಆರ್. ರಾಮದಾಸ ನಾಯ್ಡು ಬರೆದಿರುವ ‘ಕನ್ನಡ ಸಿನಿಮಾ: ಜಾಗತಿಕ ಸಿನಿಮಾ ವಿಕಾಸ - ಪ್ರೇರಣೆ ಪ್ರಭಾವ’ ಎಂಬ ಪುಸ್ತಕಕ್ಕೆ ಪ್ರಶಸ್ತಿ ನೀಡಲಾಗಿದೆ.
ನಾನು ಬಸ್ ಕಂಡಕ್ಟರ್ ಆಗಿದ್ದಾಗ, ನನ್ನೊಳಗಿನ ನಟನನ್ನು ಗುರುತಿಸುವುದರ ಜತೆಗೆ ಸಿನಿಮಾ ಸೇರುವಂತೆ ಪೋ›ತ್ಸಾಹಿಸಿದ್ದು ಬಸ್ ಚಾಲಕನಾಗಿದ್ದ ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ ರಾಜ್ ಬಹದೂರ್. ಅವರಿಗೂ ಈ ಪ್ರಶಸ್ತಿ ಅರ್ಪಿಸುತ್ತಿದ್ದೇನೆ. | ರಜನಿಕಾಂತ್