ಚಿತ್ರ: ಎಕ್ಸ್ ಆ್ಯಂಡ್ ವೈ
ನಿರ್ದೇಶನ: ಸತ್ಯಪ್ರಕಾಶ್
ತಾರಾಗಣ: ಸತ್ಯಪ್ರಕಾಶ್, ಬೃಂದಾ ಆಚಾರ್ಯ, ಅಥರ್ವ ಪ್ರಕಾಶ್, ಅಯಾನಾ, ಸುಂದರ್ ವೀಣಾ, ವೀಣಾ ಸುಂದರ್, ಹರಿಣಿ ಶ್ರೀಕಾಂತ್, ದೊಡ್ಡಣ್ಣ, ಧರ್ಮಣ್ಣ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
ಮದುವೆ ಸ್ವರ್ಗದಲ್ಲೇ ಫಿಕ್ಸ್ ಆಗಿರುತ್ತಂತೆ. ಆದರೆ, ಸ್ವರ್ಗ ಕ್ಲಿನಿಕ್ನ ಆ್ಯಂಬು ಆಟೋ (ಆಟೋ ಆ್ಯಂಬುಲೆನ್ಸ್) ಚಾಲಕ ಕ್ರೀಡೆಗೆ (ಸತ್ಯಪ್ರಕಾಶ್) ಯಾವ ಹುಡುಗಿಯೂ ಫಿಕ್ಸ್ ಆಗುವುದಿಲ್ಲ. ಅಕ್ಕ (ಹರಿಣಿ), ಭಾವ (ಸುಂದರ್) ಜತೆ ಎಷ್ಟೇ ಮನೆಗಳಿಗೆ ಹೋಗಿ ಕಾಫಿ, ಟೀ ಕುಡಿದು ಉಪ್ಪಿಟ್ಟು ತಿಂದರೂ ಕ್ರೀಡೆಗೆ ಗೆಟ್ಔಟ್ ಬಳುವಳಿ. ಕಾರಣ, ಆತನ ಬಳಿ ಆಟೋ ಬಿಟ್ಟು ಆಸ್ತಿ, ಹಣ, ಸರಿಯಾದ ಕೆಲಸ, ವಿದ್ಯೆ... ಏನೂ ಇರುವುದಿಲ್ಲ. ಹಾಗಂತ ಬೇಸರ ಮಾಡಿಕೊಳ್ಳದೇ ಕ್ರೀಡೆ ಕ್ರೀಡಾಮನೋಭಾವದಿಂದಲೇ ಎಲ್ಲವನ್ನೂ ಎದುರಿಸುತ್ತಿರುತ್ತಾನೆ. ಮತ್ತೊಂದೆಡೆ ಕೃಪಾ ಸ್ಥಿತಿವಂತ ಕುಟುಂಬದ ಅಹಂಕಾರಿ ಹುಡುಗನ ಜತೆ ಸಪ್ತಪದಿ ಇರಿಸಲು ಮದುವೆ ಮಂಟಪದಲ್ಲಿ ಸಿದ್ಧತೆ ನಡೆಸುತ್ತಿರುತ್ತಾಳೆ. ಇನ್ನೊಂದೆಡೆ ಆಶಾ (ಅಯಾನಾ) ಅಪರೂಪದ ಖಾಯಿಲೆಗೆ ತುತ್ತಾಗಿ ಗೋಳಾಡುತ್ತಿರುತ್ತಾಳೆ. ಮಗದೊಂದೆಡೆ ಆತ್ಮವೊಂದು, ಮತ್ತೊಮ್ಮೆ ಭೂಮಿಯ ಮೇಲೆ ಜನ್ಮಿಸಲು ಜಗನ್ಮಾತೆಯ ಅನುಮತಿ ಪಡೆದು ತನ್ನ ತಂದೆ&ತಾಯಿಯನ್ನು ಹುಡುಕಿಕೊಂಡು ಭೂಮಿಗೆ ಬರುತ್ತದೆ. ಅರೆ... ಇಂತಹ ಕಥೆಯನ್ನು ಕೇಳಿಲ್ಲವಲ್ಲಾ, ನೋಡಿಲ್ಲವಲ್ಲಾ ಅಂತ ಅನ್ನಿಸುತ್ತಿದೆಯೇ? ಆ ಹೊಸತನವೇ "ಎಕ್ಸ್ ಆ್ಯಂಡ್ ವೈ'.
"ರಾಮಾ ರಾಮಾ ರೇ', "ಒಂದಲ್ಲಾ ಎರಡಲ್ಲಾ', "ಮ್ಯಾನ್ ಆಫ್ ದ ಮ್ಯಾಚ್'ನಂತಹ ಸದಭಿರುಚಿ ಚಿತ್ರಗಳನ್ನು ನೀಡಿರುವ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಅವರ ವಿಭಿನ್ನ, ವಿಶೇಷ ಪ್ರಯತ್ನವಿದು. ನಿರ್ದೇಶನದ ಜತೆಗೆ ನಾಯಕನಾಗಿಯೂ ಗಮನ ಸೆಳೆಯುತ್ತಾರೆ. ಮೊದರ್ಧ ನಗೆಗಡಲಲ್ಲಿ ತೇಲಿಸುವ ಕಥೆಯು, ದ್ವೀತಿಯಾರ್ಧದಲ್ಲಿ ಜೀವನದ ಸೂಕ್ಷ್ಮ ವಿಷಯಗಳನ್ನು ದರ್ಶನ ಮಾಡಿಸಿ ಮನಸ್ಸಿಗಿಳಿದು ಗಾಢವಾಗಿ ಯೋಚಿಸುವಂತೆ, ಆಳವಾಗಿ ಪ್ರೀತಿಸುವಂತೆ ಮಾಡುತ್ತದೆ. ಕೆಲವೆಡೆ ಪೋಲಿತನವಿದ್ದರೂ, ಅದಕ್ಕೂ ಮೀರಿದ ಅಂಶಗಳು ಚಿತ್ರದಲ್ಲಿವೆ. ಸತ್ಯ ಜತೆಗೆ ಬೃಂದಾ, ಅಯಾನ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಥರ್ವ ಮತ್ತು ಸುಂದರ್ ಮ್ಯಾನರಿಸಂ ಮತ್ತು ಬಾಡಿ ಲಾಂಗ್ವೇಜ್ ಚಿತ್ರದ ಹೈಲೈಟ್. ಇನ್ಸ್ಟಾ ಚಾಟ್ನಲ್ಲೇ ಮೂಡಿಬಂದಿರುವ ಹಾಡು ಸೊಗಸಾಗಿದೆ. ಆ್ಯಂಬುಲೆನ್ಸ್ ಸೇವೆಗೆ 108 ಎಮರ್ಜೆನ್ಸಿ ನಂಬರ್ಗೆ ಕರೆ ಮಾಡುತ್ತೇವೆ. "ಎಕ್ಸ್ ಆ್ಯಂಡ್ ವೈ' ಚಿತ್ರದ ರನ್ಟೈಮ್ ಕೂಡ 108 ನಿಮಿಷಗಳಿರುವುದು ವಿಶೇಷ. ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬಂದರೆ ಅದು ಜೀವರಕ್ಷಕ ಪಯಣ, ಈ ಸಿನಿಮಾ ಬದುಕಿನ ಸತ್ಯಗಳ ಬಗ್ಗೆ ಕಣ್ತೆರೆಸುವ ಮನರಂಜನೆಯ ಪಯಣ!
ಸ್ಟಾರ್: 3.5