ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ 'ಹಾಸ್ಯ ಚಕ್ರವರ್ತಿ' ನರಸಿಂಹರಾಜು. ಡಾ. ರಾಜಕುಮಾರ್ ಜತೆಗೆ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ಅವರು, ನಂತರದ ವರ್ಷಗಳಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. 'ಬೇಡರ ಕಣ್ಣಪ್ಪ' ಚಿತ್ರದಲ್ಲಿನ ಕಾಶೀನಾಥ ಶಾಸ್ತ್ರಿ ಪಾತ್ರದಲ್ಲಿ ಗೆದ್ದ ಅವರು, ಮುಂದಿನ ದಿನಗಳಲ್ಲಿ ತಮ್ಮ ಪಾತ್ರಗಳು ಮತ್ತು ಅಭಿನಯದ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದ್ದಾರೆ.
ಇದನ್ನೂ ಓದಿ: ಕರೊನಾ ಸಂಕಷ್ಟ: ಶಿವಣ್ಣ ಮನೆಯಲ್ಲಿಂದು ಸಭೆ
ಈಗ್ಯಾಕೆ ನರಸಿಂಹರಾಜು ಅವರ ನೆನಪು ಎಂದರೆ, ಅದಕ್ಕೆ ಕಾರಣವೂ ಇದೆ. ಇಂದು ನರಸಿಂಹರಾಜು ಅವರ ಹುಟ್ಟುಹಬ್ಬ. 1923ರ ಜುಲೈ 24ರಂದು ಜನಸಿದ ಅವರು, ಈಗ ಇದ್ದಿದ್ದರೆ 97 ಮುಗಿಸಿ, 98ಕ್ಕೆ ಕಾಲಿಡುತ್ತಿದ್ದರು. ಆದರೆ, ಅವರು ನಿಧನರಾಗಿಯೇ 40ಕ್ಕೂ ಹೆಚ್ಚು ವರ್ಷಗಳಾಗಿವೆ. ಆದರೆ, ಈಗಲೂ ತಮ್ಮ ಪಾತ್ರಗಳು ಮತ್ತು ಅಭಿನಯದಿಂದ ಜನರ ಮನಸ್ಸಿನಲ್ಲಿ ಹಸಿರಾಗಿದ್ದಾರೆ.
ನರಸಿಂಹರಾಜು ಅವರ ಒಂದು ಹಿರಿಮೆ ಎಂದರೆ, ಅವರು ತಮ್ಮ ವೃತ್ತಿಜೀವನದಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ, ಕನ್ನಡ ಚಿತ್ರರಂಗದಲ್ಲಿ ನೂರು ಚಿತ್ರಗಳನ್ನು ಪೂರೈಸಿದ ಮೊದಲ ನಟ ಎಂದರೆ ಅದು ಅವರೇ. 1967ರಲ್ಲಿ ಬಿಡುಗಡೆಯಾದ ‘ನಕ್ಕರೆ ಅದೇ ಸ್ವರ್ಗ’ ಚಿತ್ರವು, ನರಸಿಂಹರಾಜು ಅಭಿನಯದ 100ನೇ ಚಿತ್ರವಾಗಿತ್ತು. ಕೇವಲ 13 ವರ್ಷಗಳ ಅಂತರದಲ್ಲಿ ಅವರು ನೂರು ಚಿತ್ರಗಳಲ್ಲಿ ನಟಿಸಿದ್ದರು ಎಂದರೆ, ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಬೇಡಿಕೆ ಇತ್ತು ಎಂಬ ವಿಷಯ ಸ್ಪಷ್ಟವಾಗುತ್ತದೆ.
ಎಂ.ಆರ್. ವಿಠ್ಠಲ್ ನಿರ್ದೆಶನದ ಈ ಸಿನಿಮಾದಲ್ಲಿ ನರಸಿಂಹರಾಜು ಅವರ ಜೊತೆಗೆ ಜಯಂತಿ, ಶೈಲಶ್ರೀ, ಅರುಣ್ ಕುಮಾರ್ ಮುಂತಾದವರು ನಟಿಸಿದ್ದರು. ಈ ಚಿತ್ರದಲ್ಲಿನ ‘ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ ...’ ಮತ್ತು ‘ನಗಬೇಕು ನಗಿಸಬೇಕು ಇದೇ ನನ್ನ ಧರ್ಮ’ ಎಂಬ ಎರಡು ಹಾಡುಗಳನ್ನು ನರಸಿಂಹರಾಜು ಅವರ ಮೇಲೆ ಚಿತ್ರೀಕರಿಸಲಾಗಿದ್ದು ವಿಶೇಷ. ಈ ಎರಡೂ ಹಾಡುಗಳಿಗೆ ಪಿ.ಬಿ. ಶ್ರೀನಿವಾಸ್ ಧ್ವನಿಯಾಗಿದ್ದರು.
ಕರ್ನಾಟಕ ಸರ್ಕಾರವು 60ರ ದಶಕದಲ್ಲಿ ಕನ್ನಡ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಕೊಡುವ ಸಂಪ್ರದಾಯ ಪ್ರಾರಂಭಿಸಿದಾಗ, ಮೊದಲು ಪ್ರಶಸ್ತಿ ಪಡೆದ ಚಿತ್ರವೆಂದರೆ ಅದು ‘ನಕ್ಕರೆ ಅದೇ ಸ್ವರ್ಗ’. ಈ ಚಿತ್ರವು 1966-67ನೇ ಸಾಲಿನ ಅತ್ಯುತ್ತಮ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.