ಬೆಂಗಳೂರು: ರೈತರ ಕಷ್ಟಗಳು ಬಹಳಷ್ಟಿವೆ. ದೇಶದ ಬೆನ್ನೆಲುಬಾಗಿರುವ ರೈತರ ಕಷ್ಟಗಳನ್ನು ಅನಾವರಣಗೊಳಿಸುವ ಸಾಕಷ್ಟು ಸಿನಿಮಾಗಳು ಈಗಾಗಲೇ ತೆರೆ ಮೇಲೆ ಬಂದಿವೆ. ಆದರೆ, ‘ನರಗುಂದ ಬಂಡಾಯ’ ಅವೆಲ್ಲಕ್ಕಿಂತ ಕೊಂಚ ವಿಭಿನ್ನವಾಗಿ ನಿಲ್ಲುತ್ತದೆ. ಏಕೆಂದರೆ, ಈ ಬಂಡಾಯದಿಂದಾಗಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಇಂದಿಗೂ ಜನ ನರಗುಂದಕ್ಕೆ ಬಂದರೆ ಆ ಹೋರಾಟಗಾರರ ಕಥೆಯನ್ನು ಕೇಳದೇ ಹೋಗುವುದಿಲ್ಲ.
ಇಂತಹ ಒಂದು ಪ್ರಮುಖ ಘಟನೆಯನ್ನು ತೆರೆ ಮೇಲೆ ತರುವಾಗ ನಿರ್ದೇಶಕ ನಾಗೇಂದ್ರ ಮಾಗಡಿ ಅದಕ್ಕೆ ಕೊಂಚ ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿದ್ದಾರೆ. ಕಥಾನಾಯಕ ವೀರಪ್ಪ ಬಸಪ್ಪ ಕಡ್ಲಿಕೊಪ್ಪನ ಲವ್ ಸ್ಟೋರಿ, ಆತನ ಕುಟುಂಬ, ಉಳ್ಳವರ ದೌರ್ಜನ್ಯ, ಹಳ್ಳಿಗಳನ್ನು ಆವರಿಸಿದ್ದ ಮಟ್ಕಾ ದಂಧೆ, ಸರ್ಕಾರಿ ಅಧಿಕಾರಿಗಳ ಉಡಾಫೆ ವರ್ತನೆಗಳು ... ಹೀಗೆ ಸಾಕಷ್ಟು ಅಂಶಗಳನ್ನು ಸೇರಿಸಿ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದಾರೆ. ಜತೆಗೆ ರೈತರ ಸಮಸ್ಯೆಗಳು ಎಂದಿಗೂ ಮುಗಿಯುವುದಿಲ್ಲ, ಬಾಗಿರುವ ಬೆನ್ನು ಬಾಗೇ ಇರುತ್ತದೆ ಎಂಬುದನ್ನು ಈ ಹೋರಾಟದ ಕಥೆಯ ಮೂಲಕ ಸೂಚ್ಯವಾಗಿ ಹೇಳಲಾಗಿದೆ. ಇಡೀ ಚಿತ್ರವನ್ನು ಉತ್ತರ ಕರ್ನಾಟಕದಲ್ಲಿಯೇ ಸೆರೆಹಿಡಿದು ನೈಜತೆಗೆ ಹತ್ತಿರ ಇರುವಂತೆ ನೋಡಿಕೊಂಡಿದ್ದಾರೆ. ಇಂತಹ ಕಥೆಗಳಲ್ಲಿ ಡ್ಯುಯೆಟ್ಗಳ ಅವಶ್ಯಕತೆ ಇಲ್ಲ. ಆದರೂ ನಿರ್ದೇಶಕರು ಎರಡು ಹಾಡುಗಳನ್ನು ಸೇರಿಸಿದ್ದಾರೆ. ಅವೇನೂ ಅಷ್ಟು ಗಮನ ಸೆಳೆಯುವುದಿಲ್ಲ. ಹೋರಾಟದ ಹಾಡು ಮಾತ್ರ ಕೊಂಚ ಇಷ್ಟವಾಗುತ್ತದೆ. ಇನ್ನು ಸಂಭಾಷಣೆ ವಿಚಾರದಲ್ಲಿ ಕೇಶವಾದಿತ್ಯ ಸಿಕ್ಕಾಪಟ್ಟೆ ಶಿಳ್ಳೆ ಗಿಟ್ಟಿಸುತ್ತಾರೆ.
ಉತ್ತರ ಕರ್ನಾಟಕದ ಮಂದಿಯ ರೈತರಿಗೆ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಇಂದಿಗೂ ಸ್ಪೂರ್ತಿಯ ಚಿಲುಮೆ. ಅವರ ಪಾತ್ರವನ್ನು ನಟ ರಕ್ಷ್ ಆವಾಹಿಸಿಕೊಂಡಿದ್ದಾರೆ. ಹೋರಾಟಗಾರನಾಗಿ, ರೈತರ ಪ್ರತಿನಿಧಿಯಾಗಿ ಮತ್ತು ಪ್ರೇಮಿಯಾಗಿ ಗಮನಸೆಳೆಯುತ್ತಾರೆ. ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುತ್ತಾರೆ. ಶುಭಾ ಪೂಂಜಾ ಉತ್ತರ ಕರ್ನಾಟಕದ ಜವಾರಿ ಹುಡುಗಿಯಾಗಿ ಖಡಕ್ ಆಗಿ ನಟಿಸಿದ್ದಾರೆ. ಅವಿನಾಶ್, ‘ನೀನಾಸಂ’ ಅಶ್ವತ್ಥ್, ಶಿವಕುಮಾರ್ ಸೇರಿದಂತೆ ಎಲ್ಲ ಕಲಾವಿದರು ತಂತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರೈತ ಹೋರಾಟಗಳು ಎಷ್ಟು ಪ್ರಾಮಾಣಿಕವಾಗಿದ್ದವು ಮತ್ತು ತಮ್ಮ ಹಕ್ಕಿಗಾಗಿ ಎಷ್ಟು ತೀವ್ರವಾಗಿ ಹೋರಾಟ ನಡೆಯುತ್ತಿತ್ತು ಎಂದು ತಿಳಿದುಕೊಳ್ಳುವ ಕುತೂಹಲ ಇರುವ ಎಲ್ಲರೂ ಈ ಚಿತ್ರವನ್ನು ಒಮ್ಮೆ ನೋಡಬಹುದು.
ಚಿತ್ರ: ನರಗುಂದ ಬಂಡಾಯ ನಿರ್ದೇಶನ: ನಾಗೇಂದ್ರ ಮಾಗಡಿ ನಿರ್ವಣ: ಓಂಕಾರ್ ಫಿಲಂಸ್ ಪಾತ್ರವರ್ಗ: ರಕ್ಷ್, ಶುಭಾ ಪೂಂಜಾ, ಅವಿನಾಶ್, ರವಿಚೇತನ್, ಮತ್ತಿತರರರು