ಬೆಂಗಳೂರು: ಶಿವರಾಜ್ ಕೆ.ಆರ್.ಪೇಟೆ ಅಭಿನಯದಲ್ಲಿ ‘ನಾನು ಮತ್ತು ಗುಂಡ’ ಚಿತ್ರವು 2020ರಲ್ಲಿ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಈ ಚಿತ್ರದ ಸಿಕ್ವೇಲ್ ಬರುತ್ತಿದ್ದು, ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿ, ಬಿಡುಗಡೆಗೆ ಸಿದ್ಧವಾಗಿದೆ. ರಘು ಹಾಸನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರಾಕೇಶ್ ಅಡಿಗ ಹಾಗೂ ರಚನಾ ಇಂದರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಮನುಷ್ಯ ಹಾಗೂ ಪ್ರಾಣಿಗಳ ಅನನ್ಯ ಬಂಧ, ಲವ್‌ಸ್ಟೋರಿ, ಆಧ್ಯಾತ್ಮ ಹೀಗೆ ನಾನಾ ವಿಚಾರಗಳನ್ನು ಇಲ್ಲಿ ಕಾಣಬಹುದು. ಚಿತ್ರದ ಬಗ್ಗೆ ರಘು ಹಾಸನ್ ಮಾಹಿತಿ ಹಂಚಿಕೊಂಡು, ‘‘ನಾನು ಮತ್ತು ಗುಂಡ’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಶೂಟಿಂಗ್ ಸಮಯದಲ್ಲಿಯೇ ನಮಗೆ ಸಿಕ್ವೇಲ್ ಯೋಚನೆ ಬಂದಿತ್ತು. ಆದರೆ, ಮೊದಲು ಸಿನಿಮಾ ರಿಲೀಸ್ ಆಗಲಿ, ಬಳಿಕ ಸಿಕ್ವೇಲ್ ನಿರ್ಧರಿಸೋಣ ಎಂದುಕೊಂಡೆವು. ಅಂತೆಯೇ, ಚಿತ್ರ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ವ್ಯಕ್ತವಾಯಿತು. ಅಲ್ಲಿ ನಾಯಕ ತೀರಿ ಹೋಗುತ್ತಾನೆ. ನಮಗೆ ಗುಂಡನಿಗೆ ನ್ಯಾಯ ಒದಗಿಸಬೇಕಾಗಿತ್ತು. ಆ ಕಾರಣಕ್ಕಾಗಿ ನಾಯಕನ ಆತ್ಮದ ಮೂಲಕ ಈ ಕಥೆಯನ್ನು ಮುಂದುವರಿಸಿದ್ದೇವೆ. ನಾಯಿ ಹಾಗೂ ಮನುಷ್ಯ ಬಾಂಧವ್ಯವನ್ನು ಭಾವತೀವ್ರವಾಗಿ ಇಲ್ಲಿ ತೋರಿಸಿದ್ದೇವೆ. ರಾಕೇಶ್ ಅಡಿಗ ಹಾಗೂ ರಚನಾ ಇಂದರ್ ಪಾತ್ರಗಳಿಗೆ ಒಪ್ಪಿದ್ದಾರೆ. ರಾಕೇಶ್ ಅದ್ಭುತವಾಗಿ ಎಮೋಷನ್ ಕ್ಯಾರಿ ಮಾಡುತ್ತಾರೆ. ಒಟ್ಟು ನಾಲ್ಕು ನಾಯಿಗಳು ಇಲ್ಲಿ ಅಭಿನಯಿಸಿವೆ. 70 ದಿನಗಳ ಕಾಲ ಶಿವಮೊಗ್ಗ, ತೀರ್ಥಹಳ್ಳಿ, ಬೆಂಗಳೂರು ಹಾಗೂ ಊಟಿಯಲ್ಲಿ ಶೂಟಿಂಗ್ ಮಾಡಿದ್ದೇವೆ. ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಜೂನ್ ಅಂತ್ಯಕ್ಕೆ ಸಿನಿಮಾ ರಿಲೀಸ್‌ಗೆ ನಿರ್ಧರಿಸಿದ್ದೇವೆ. ಹಾಗೆಯೇ ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡುತ್ತೇವೆ. ಇಲ್ಲಿನ ರೆಸ್ಪಾನ್ಸ್ ನೋಡಿಕೊಂಡು, ಪ್ಯಾನ್ ಇಂಡಿಯಾ ಹೊರಡಲಿದ್ದೇವೆ’ ಎಂದು ಮಾಹಿತಿ ನೀಡಿದರು.
ಡಾಗ್ ಶೋ: ‘ನಾನು ಮತ್ತು ಗುಂಡ-2’ ಚಿತ್ರತಂಡವು ವಿಭಿನ್ನವಾದ ಪ್ರಚಾರಕ್ಕೆ ಮುಂದಾಗಿದೆ. ಸಿನಿಮಾ ಗಣ್ಯರಿಗೆ ಪ್ರೀಮಿಯರ್ ಶೋ ನಡೆಸುವುದು ಸಾಮಾನ್ಯ. ಆದರೆ, ಈ ತಂಡವು ನಾಯಿ ಹಾಗೂ ಅದರ ಮಾಲಕರಿಗಾಗಿಯೇ ಒಂದು ಶೋ ನಡೆಸಲಿದೆ. ನಾಯಿ ಹಾಗೂ ಮನುಷ್ಯನ ನಡುವಿನ ಸಂಬಂಧದ ಬಗ್ಗೆ ಈ ಚಿತ್ರ ಇರುವ ಕಾರಣ ಈ ನಿರ್ಧಾರ ಮಾಡಲಾಗಿದೆ ಎನ್ನುತ್ತಾರೆ ರಘು ಹಾಸನ್.