ಬೆಂಗಳೂರು: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಭೂತಯ್ಯನ ಮಗ ಅಯ್ಯು’ ಕೃತಿ ಸಿನಿಮಾ ಆಗಿರುವುದು ಗೊತ್ತಿರುವ ಸಂಗತಿ. ಇದೀಗ ‘ನಮ್ಮ ಊರಿನ ರಸಿಕರು’ ಕೃತಿ ಈ ಸಲ ಸಿನಿಮಾ ಬದಲಿಗೆ ವೆಬ್ ಸಿರೀಸ್ ರೂಪದಲ್ಲಿ ಸಿದ್ಧವಾಗಿದೆ. ಅಷ್ಟೇ ಅಲ್ಲ ರಾಜ್ಯೋತ್ಸವದ ಪ್ರಯುಕ್ತ ಒಟಿಟಿಯಲ್ಲಿ ಬಿಡುಗಡೆಗೂ ಸಜ್ಜಾಗಿದೆ. ಈ ವಿಚಾರವನ್ನು ಹೇಳಿಕೊಳ್ಳಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಬಿ. ಸುರೇಶ್, ಪಿ. ಶೇಷಾದ್ರಿ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಮಂಡ್ಯ ರಮೇಶ್, ರಮೇಶ್ ಪಂಡಿತ್, ಸುನೇತ್ರಾ ಪಂಡಿತ್, ಸುಂದರ್, ಶಶಿ, ಅಂಜನ್, ಶೃಂಗ, ಮಂಗಳಾ, ಸುಚೇಂದ್ರ.. ಹೀಗೆ ಕಲಾವಿದರ ದಂಡೇ ‘ನಮ್ಮ ಊರಿನ ರಸಿಕರು’ ವೆಬ್ಸರಣಿಯ ಭಾಗವಾಗಿದ್ದಾರೆ.
ಸ್ವಾತಂತ್ರ್ಯ ಪೂರ್ವದ ಕಥೆ ಇದಾಗಿದ್ದು, ಹಳ್ಳಿ ಸೊಗಡು, ಮಲೆನಾಡ ಮಣ್ಣಿನ ವಾಸನೆ, ಅಲ್ಲಿನ ಹಾಸ್ಯ, ವ್ಯಂಗ್ಯ, ಜೀವನ ಪ್ರೀತಿ, ವಿಕಾರ ಮನಸ್ಥಿತಿ.. ಹೀಗೆ ಹಲವು ಆಯಾಮಗಳಲ್ಲಿ ನಿರ್ದೇಶನ ಮಾಡಿದ್ದಾರೆ ನಿರ್ದೇಶಕಿ ನಂದಿತಾ ಯಾದವ್. ‘ಒಟಿಟಿಯಲ್ಲಿ ಇದೇ ನ.1ರಿಂದ 8 ಕಂತುಗಳಲ್ಲಿ ಈ ಸರಣಿ ಪ್ರಸಾರವಾಗಲಿದೆ. 90 ವರ್ಷದ ಹಿಂದಿನ ಸಾಹಿತ್ಯ ಕೃತಿಯನ್ನು ದೃಶ್ಯ ಮಾಧ್ಯಮಕ್ಕೆ ತಂದಿದ್ದೇವೆ. ಇಂಥ ಅವಕಾಶ ಸಿಕ್ಕಿದ್ದು ನಿಜಕ್ಕೂ ನನ್ನ ಪುಣ್ಯ. ನನ್ನ ಹಲವು ದಶಕಗಳ ಸ್ನೇಹಿತರ ಜತೆಗೆ ಕೆಲಸ ಮಾಡಿದ್ದು, ಖುಷಿಯ ವಿಚಾರ’ ಎಂದರು ನಂದಿತಾ. ಶಿವಮೊಗ್ಗ ಜಿಲ್ಲೆಯ ಹಲವೆಡೆ ವೆಬ್ಸರಣಿಯ ಚಿತ್ರೀಕರಣ ಆಗಿದೆ. ಅಶೋಕ್ ಕಶ್ಯಪ್ ಛಾಯಾಗ್ರಹಣ, ಪ್ರಕಾಶ್ ಸೊಂಟಕ್ಕೆ ಸಂಗೀತ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ. ಕ್ಯಾರಂಬೋಲ, ಮ್ಯಾಂಗೋ ಹೌಸ್ ಇಂಡಿಯಾ ಮತ್ತು ಕಟ್ಟೆ ಈ ವೆಬ್ಸರಣಿಯನ್ನು ನಿರ್ವಿುಸಿವೆ.