ಬೆಂಗಳೂರು: ನಹಿ ಜ್ಞಾನೇನ ಸದೃಶಂ ...
ಹೀಗೆ ಪ್ರಾರಂಭವಾಗುವ ಭಗವದ್ಗೀತೆಯ ಶ್ಲೋಕವೊಂದು ಈಗ ಚಿತ್ರದ ಹೆಸರಾಗಿದೆ. ಅಮೆರಿಕಾದಲ್ಲಿ ಟೆಕ್ಕಿಯಾಗಿರುವ ಬಳ್ಳಾರಿ ಮೂಲದ ರಾಮ್ ‘ನಹಿ ಜ್ಞಾನೇನ ಸದೃಶಂ’ ಎಂಬ ಮಕ್ಕಳ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ಮೂಲಕ ಜ್ಞಾನದ ಮಹತ್ವವನ್ನು ಸಾರಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ. ಹರೀಶ್, ಸುಂದರ್ರಾಜ್, ಟಿ.ಪಿ. ಸಿದ್ಧರಾಜು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ರಾಮ್ ಶಾಲೆಯಲ್ಲಿ ನಾವು ಕಲಿತು ಮರೆತುಬಿಡುತ್ತೇವೆ. ನಮಗೆ ಅದರ ನೆನಪೂ ಇರುವುದಿಲ್ಲ ಮತ್ತು ಎಷ್ಟೋ ಬಾರಿ ನಾವು ಕಲಿತಿದ್ದನ್ನು ಜೀವನದಲ್ಲಿ ಬಳಸಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ನನಗೆ ಯಾವಾಗಲೂ ಈ ವಿಷಯ ಕಾಡುತ್ತಿತ್ತು. ನಾವು ಏನೇ ಕಲಿತರೂ ಅದು ನೆನಪಿರಬೇಕು ಮತ್ತು ಅದನ್ನು ಬಳಕೆ ಮಾಡಬೇಕು ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇದರ ಮೇಲೆ ಕಥೆ ಹೇಳಿದ್ದೇನೆ, ಇದರ ಜತೆಗೆ ನಮ್ಮ ಗುರುಕುಲದ ಪದ್ಧತಿಯ ಬಗ್ಗೆ ಬೆಳಕು ಚೆಲ್ಲಿದರೆ ಚೆನ್ನಾಗಿರುತ್ತದೆ ಎಂದನಿಸಿತು. ಹಾಗಾಗಿ, ಮಹಾಭಾರತದಲ್ಲಿ ಜ್ಞಾನದ ಕುರಿತಾದ ಐದು ವಿಭಿನ್ನ ಕಥೆಗಳನ್ನು ಬಳಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಜ್ಞಾನ ಮತ್ತು ಆಧ್ಯಾತ್ಮಿಕ ಜ್ಞಾನದ ಮಹತ್ವವನ್ನು ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳುತ್ತಾರೆ ರಾಮ್.
ಇಲ್ಲಿ ಚಿತ್ರದ ನಾಯಕ ಅಮೆರಿಕದಿಂದ ಬಂದು ಶಾಲೆಯಲ್ಲಿ ಮಕ್ಕಳಿಗೆ ವಿಭಿನ್ನವಾಗಿ ಶಿಕ್ಷಣ ಕೊಡುವುದಕ್ಕೆ ಪ್ರಯತ್ನಿಸುತ್ತಾನೆ. ಇದರಿಂದ ಹಲವು ಅಪವಾದಗಳನ್ನೂ ಎದುರಿಸುತ್ತಾನಂತೆ. ಅದನ್ನು ದೂರ ಮಾಡಲು ಮಕ್ಕಳಿಗೆ ನಿಧಿ ಸಂಗ್ರಹಿಸುವ ಆಟವನ್ನು ಆಡಿಸಿ ಅದರ ಮೂಲಕ ಜ್ಞಾನದ ಪ್ರಾಮುಖ್ಯತೆ ಹಾಗೂ ಅದರ ಉಪಯೋಗಗಳನ್ನು ತಿಳಿಸುವುದೇ ಚಿತ್ರದ ಕಥೆ.
‘ನಹಿ ಜ್ಞಾನೇನ ಸದೃಶಂ’ ಚಿತ್ರದಲ್ಲಿ ವೇದಿಕಾ, ಎಸ್.ಪಿ. ಬೆಟ್ಟೇಶ್, ಶರತ್, ಗಗನ, ಶ್ರೀನಿಧಿ ಮುಂತಾದ ಮಕ್ಕಳು ನಟಿಸಿದ್ದು, ಅವರೊಂದಿಗೆ ಅರುಣಾ ಬಾಲರಾಜ್, ಎಸ್.ಪಿ. ಮಹೇಶ್, ರಾಘವೇಂದ್ರ ನಾಯಕ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಮು ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಬಳ್ಳಾರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರವು ಸೆನ್ಸಾರ್ ಸಹ ಆಗಿದ್ದು, ನವೆಂಬರ್ನಲ್ಲಿ ಬಿಡುಗಡೆಯಾಗಲಿದೆ.