ಸಿನಿವಾಣಿ

ಜೀನಿಯಸ್​ ಮುತ್ತನ ಜತೆ ಚಿನ್ನಾರಿ ಮುತ್ತ ; ಟಿ.ಎಸ್​. ನಾಗಾಭರಣ ಪತ್ನಿ ನಾಗಿಣಿ ಭರಣ ನಿರ್ದೇಶನದ ಸಿನಿಮಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹಿರಿಯ ನಿರ್ದೇಶಕ ಟಿ.ಎಸ್​ ನಾಗಾಭರಣ 1993ರಲ್ಲಿ "ಚಿನ್ನಾರಿ ಮುತ್ತ' ಚಿತ್ರ ನಿರ್ದೇಶಿಸಿದ್ದರು. ವಿಜಯ ರಾವೇಂದ್ರ ಬಾಲನಟನಾಗಿ ಅಭಿನಯಿಸಿದ್ದ ಈ ಚಿತ್ರಕ್ಕೆ ಒಂದು ರಾಷ್ಟ್ರಪ್ರಶಸ್ತಿ ಜತೆಗೆ ನಾಲ್ಕು ರಾಜ್ಯ ಪ್ರಶಸ್ತಿಗಳು ದೊರೆತಿದ್ದವು. ಇದೀಗ 31 ವರ್ಷಗಳ ಬಳಿಕ ನಾಗಾಭರಣ ಅವರ ಪತ್ನಿ ನಾಗಿಣಿ ಭರಣ "ಜೀನಿಯಸ್​ ಮುತ್ತ' ಚಿತ್ರಕ್ಕೆ ಆ್ಯಕ್ಷನ್​&ಕಟ್​ ಹೇಳಿದ್ದಾರೆ. ಚಿತ್ರದಲ್ಲಿ "ಜೀನಿಯಸ್​ ಮುತ್ತ'ನಾಗಿ ಶ್ರೇಯಸ್​ ಜೈಪ್ರಕಾಶ್​ ನಟಿಸಿದ್ದು, ವಿಶೇಷ ಪಾತ್ರದಲ್ಲಿ "ಚಿನ್ನಾರಿ ಮುತ್ತ' ವಿಜಯ್​ ರಾವೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ.

ಚಿತ್ರದ ಬಗ್ಗೆ ನಾಗಿಣಿ ಭರಣ, "ನನಗೆ ಹಲವು ವರ್ಷಗಳಿಂದ ನಿರ್ದೇಶನ ಮಾಡಲು ಎಲ್ಲರೂ ಹೇಳುತ್ತಿದ್ದರು. ಆದರೆ, ಆಗಿರಲಿಲ್ಲ. ಈಗ ಕಾಲ ಕೂಡಿಬಂದಿದೆ. ವಿಭಿನ್ನ ಕಥಾಹಂದರದ ಚಿತ್ರವಿದು. ಬಹುತೇಕ ಬಿಳಿಗಿರಿರಂಗನ ಬೆಟ್ಟದಲ್ಲಿ ಶೂಟಿಂಗ್​ ನಡೆಸಿದ್ದೇವೆ. ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ, ವಿದೇಶಗಳಲ್ಲೂ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ' ಎಂದು ಸಂತಸ ವ್ಯಕ್ತಪಡಿಸಿದರು. "ನಾಗಿಣಿ ನನ್ನೆಲ್ಲ ಸಿನಿಮಾ, ಧಾರಾವಾಹಿಗಳ ನಿರ್ದೇಶನಕ್ಕೆ ಸಹಕಾರ ನೀಡುತ್ತಿದ್ದರು. ಈಗ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದೇನೆ' ಎಂದು ಮಾಹಿತಿ ನೀಡಿದರು ನಾಗಾಭರಣ.

"ನಾನು ನಾಗಾಭರಣ ಅವರ ಗರಡಿಯಲ್ಲೇ ನಟನೆ ಕಲಿತಿದ್ದು' ಎಂದರು ಬಾಲನಟ ಮಾಸ್ಟರ್​ ಶ್ರೇಯಸ್​. ನಟ ವಿಜಯ್​ ರಾವೇಂದ್ರ, "ನನ್ನ ಹೆಸರಿಗಿಂತ ಎಲ್ಲರಿಗೂ ನಾನು ಚಿನ್ನಾರಿ ಮುತ್ತ ಎಂದೇ ಪರಿಚಿತ. ಅದಕ್ಕೆ ಅವಕಾಶ ನೀಡಿದವರು ನಾಗಾಭರಣ ಸರ್​. ಈಗ ನಾಗಿಣಿ ಮೇಡಂ ನಿರ್ದೇಶನದಲ್ಲೂ ನಟಿಸಿರುವುದು ಖುಷಿ ನೀಡಿದೆ' ಎಂದರು. "ಜೀನಿಯಸ್​ ಮುತ್ತ' ಇದೇ ಆ. 9ರಂದು ತೆರೆಗೆ ಬರಲಿದೆ.