ಕ್ಯಾರವಾನ್‌ಗೆ ನುಗ್ಗಿ ಶರ್ಟ್ ಬಿಚ್ಚಿದ ಸಹಾಯಕ ನಿರ್ದೇಶಕ: ಕಹಿ ಅನುಭವ ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್! Kajal Aggarwal
- ಕ್ಯಾರವಾನ್‌ಗೆ ಅತಿಕ್ರಮವಾಗಿ ನುಗ್ಗಿ ಶರ್ಟ್ ಬಿಚ್ಚಿದ ಸಹಾಯಕ ನಿರ್ದೇಶಕನ ಅಸಭ್ಯ ವರ್ತನೆ ಬಿಚ್ಚಿಟ್ಟ ಕಾಜಲ್ ಅಗರ್ವಾಲ್
- ನನ್ನ ಹೆಸರು ಟ್ಯಾಟೂ ತೋರಿಸಲು ಬಾಗಿಲು ತಟ್ಟದೆ ಕ್ಯಾರವಾನ್ ಹೊಕ್ಕ ಅಸಿಸ್ಟೆಂಟ್ ಡೈರೆಕ್ಟರ್ ಕಂಡು ಕಂಗಾಲಾದ ಕಾಜಲ್
- ಬಾಗಿಲು ತಟ್ಟದೆ ಕ್ಯಾರವಾನ್‌ಗೆ ನುಗ್ಗಿದ ಶರ್ಟ್ ಬಿಚ್ಚಿದ ವ್ಯಕ್ತಿಗೆ ಕ್ರಿಮಿನಲ್ ಕೇಸ್ ಎಚ್ಚರಿಕೆ ನೀಡಿದ ನಟಿ ಕಾಜಲ್
- ಎಷ್ಟೇ ದೊಡ್ಡ ಅಭಿಮಾನಿಯಾಗಿದ್ದರೂ ಇಂತಹ ಅತಿರೇಕದ ವರ್ತನೆ ಒಪ್ಪಲು ಸಾಧ್ಯವಿಲ್ಲ ಎಂದ ಕಾಜಲ್ ಅಗರ್ವಾಲ್
ಹೈದರಾಬಾದ್: ತೆಲುಗು ಚಿತ್ರರಂಗದ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ( Kajal Aggarwal ) ಅವರು ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ತಮಗಾದ ಅತ್ಯಂತ ಕಹಿ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ಸಹಾಯಕ ನಿರ್ದೇಶಕನೊಬ್ಬ ಅನುಮತಿಯಿಲ್ಲದೆ ತಮ್ಮ ಕ್ಯಾರವಾನ್ ಹೊಕ್ಕು ಶರ್ಟ್ ಬಿಚ್ಚಿ ತನ್ನ ಎದೆಯ ಮೇಲಿದ್ದ ಟ್ಯಾಟೂ ತೋರಿಸಿದ ಆಘಾತಕಾರಿ ಪ್ರಸಂಗವನ್ನು ಬಹಿರಂಗಪಡಿಸಿದ್ದಾರೆ.
ಸಿನಿಮಾ ಚಿತ್ರೀಕರಣ ಮುಗಿಸಿ ತಮ್ಮ ಕ್ಯಾರವಾನ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ನಿರ್ದೇಶಕನೊಬ್ಬ ಯಾವುದೇ ಅನುಮತಿ ಪಡೆಯದೆ, ಬಾಗಿಲು ತಟ್ಟದೆ ಏಕಾಏಕಿ ಒಳಗಡೆ ಬಂದನು. ಹೀಗೆ ಬಂದವನು ತಕ್ಷಣವೇ ತನ್ನ ಶರ್ಟ್ ಬಿಚ್ಚಿ, ತನ್ನ ಎದೆಯ ಮೇಲೆ ಇದ್ದ ನನ್ನ ಹೆಸರಿನ ಹಚ್ಚೆಯನ್ನು (Tattoo) ತೋರಿಸಿದನು. ಈ ಹಠಾತ್ ಘಟನೆಯಿಂದ ನಾನು ಆಘಾತಕ್ಕೊಳಗಾದೆ. ಹೇಳಬೇಕೆಂದರೆ, ಆ ಸಮಯದಲ್ಲಿ ನನ್ನ ಕೈಕಾಲುಗಳು ನಡುಗುತ್ತಿದ್ದವು ಎಂದು ಕಾಜಲ್ ಅವರು ಇತ್ತೀಚಿನ ಮಾಧ್ಯಮ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಹೆಸರನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವಷ್ಟು ಪ್ರೀತಿಸುವ ಅಭಿಮಾನಿಗೆ ಧನ್ಯವಾದ ಅರ್ಪಿಸಿದರೂ, ಆ ವ್ಯಕ್ತಿ ನಡೆದುಕೊಂಡ ರೀತಿ ಸಂಪೂರ್ಣವಾಗಿ ಅಸಭ್ಯವಾಗಿತ್ತು ಎಂದು ಕಾಜಲ್ ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬ ಮಹಿಳೆ ಏಕಾಂಗಿಯಾಗಿ ವಿಶ್ರಾಂತಿ ಪಡೆಯುತ್ತಿರುವ ಜಾಗಕ್ಕೆ ಅನುಮತಿಯಿಲ್ಲದೆ ನುಗ್ಗುವುದು ಖಂಡನೀಯ. ಎಷ್ಟೇ ದೊಡ್ಡ ಅಭಿಮಾನಿಯಾಗಿದ್ದರೂ ಇಂತಹ ಅತಿರೇಕದ ವರ್ತನೆಯನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಖಡಕ್ ಆಗಿ ಹೇಳಿರುವುದಾಗಿ ಎಬಿಪಿ ನ್ಯೂಸ್ ವರದಿ ಮಾಡಿದೆ.
ಇದೇ ವೇಳೆ, ಆ ವ್ಯಕ್ತಿಗೆ ಗಂಭೀರ ಎಚ್ಚರಿಕೆಯನ್ನೂ ನೀಡಿದ್ದಾಗಿ ನಟಿ ತಿಳಿಸಿದ್ದಾರೆ. ಈ ರೀತಿಯ ಕಾನೂನುಬಾಹಿರ ಹಾಗೂ ಅನಾಗರಿಕ ನಡವಳಿಕೆಯು ಅಪರಾಧವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಗದರಿ, ಅವರನ್ನು ಕ್ಯಾರವಾನ್‌ನಿಂದ ಹೊರಗೆ ಕಳುಹಿಸಿರುವುದಾಗಿ ಕಾಜಲ್ ತಿಳಿಸಿದ್ದಾರೆ.
2004ರಲ್ಲಿ ಬಾಲಿವುಡ್‌ನ 'ಕ್ಯೂಂ! ಹೋ ಗಯಾ ನಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕಾಜಲ್, 2009ರಲ್ಲಿ ತೆರೆಕಂಡ ಎಸ್‌ಎಸ್ ರಾಜಮೌಳಿ ಅವರ ‘ಮಗಧೀರ’ ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಿ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆದರು. ಇತ್ತೀಚೆಗೆ ಜುಲೈ 24ರಂದು ಬಿಡುಗಡೆಯಾದ 'ದಿ ಇಂಡಿಯಾ ಸ್ಟೋರಿ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಕಾಜಲ್, ಸಿಂಗಂ ಹಾಗೂ ಸ್ಪೆಷಲ್ 26 ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ, (ಏಜೆನ್ಸೀಸ್).